ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಭಾಗದ ಮೂರೂ ಸುತ್ತಲೂ ಹೊಳೆಯಿದೆ. ಆದರೆ ಕುಡಿಯುವ ನೀರಿಗೆ ಮಾತ್ರ ಬರ ಉಂಟಾಗಿದೆ. ಕಾರಣ ಇಲ್ಲಿರುವ ಬಾವಿ, ಸಹಿತ ಎಲ್ಲ ನೀರಿನ ಮೂಲಗಳಲ್ಲಿ ಉಪ್ಪು ನೀರಿನ ಪ್ರಭಾವವಿದೆ. ಇಲ್ಲಿನ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ‘ಜೀವಜಲ’ಕ್ಕೆ ಸಂಕಷ್ಟ ಎದುರಾಗಿದೆ.
ಟ್ಯಾಂಕರ್ ನೀರು ಪೂರೈಕೆ
ಕಿರಿಮಂಜೇಶ್ವರ ಗ್ರಾ.ಪಂ. ಪಂಚಾಯತ್ ವತಿಯಿಂದ ಕೊಡೇರಿ ಭಾಗಕ್ಕೆ ಎರಡು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿ ಮನೆಗೆ 150ರಿಂದ 200 ಲೀಟರ್ ವರೆಗೆ ಕೊಡಲಾಗುತ್ತಿದೆ. ಆದರೆ ಇದು ಸಾಲದಾಗಿದೆ. ಇನ್ನು 3 ದಿನಕ್ಕೊಮ್ಮೆ ನಳ್ಳಿ ಮೂಲಕ ಮನೆಗೆ 4-5 ಕೊಡಪಾನವಷ್ಟೇ ನೀರು ಸರಬರಾಜು ಮಾಡಲಾಗುತ್ತಿದೆ.
ಸಮಸ್ಯೆಯೇನು?
Advertisement
ಕೊಡೇರಿಯ ಅಕ್ಕರಮಠ ದೇವಸ್ಥಾನದ ಉತ್ತರ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆಯಿದ್ದರೆ, ಇಲ್ಲಿನ ಎಡ ಮಾವಿನ ಹೊಳೆಯಲ್ಲಿ 60-70 ಮನೆಗಳಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.
Related Articles
Advertisement
ನೀರಿನ ಸಮೃದ್ಧತೆಯಿದೆ. ಆದರೆ ಅದನ್ನು ಪಂಚಾಯತ್ ಸಮರ್ಪಕವಾಗಿ ನಿರ್ವಹಿಸುವಲ್ಲಿ ಎಡವಿದೆ ಎನ್ನುವುದು ಸ್ಥಳೀಯರೊಬ್ಬರ ಆರೋಪ. ಇದು ಅಲ್ಲದೆ ನಳ್ಳಿ ನೀರು ನಿರ್ವಹಣೆ ವ್ಯವಸ್ಥೆ ಸರಿಯಿಲ್ಲ. ಅದಕ್ಕೊಂದು ಸರಿಯಾದ ಸಮಯ ಕೂಡ ನಿಗದಿ ಮಾಡಿಲ್ಲ. ನೀರು ಬಿಡುವವರು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.
ರಸ್ತೆ ಸಂಪರ್ಕವಿಲ್ಲ
ಇಲ್ಲಿ ಟ್ಯಾಂಕರ್ ಮೂಲಕ ಪಂಚಾಯತ್ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದರೂ, ಕೊಡೇರಿ ಅಕ್ಕರಮಠ ದೇವಸ್ಥಾನದ ಉತ್ತರ ಭಾಗದ ಮುಂದಕ್ಕೆ ರಸ್ತೆ ಸಂಪರ್ಕವೇ ಇಲ್ಲ. ಇಲ್ಲಿಂದ ಮುಂದಕ್ಕೆ ಟ್ಯಾಂಕರ್ ಸಂಚರಿಸುವುದು ಕಷ್ಟ. ಹಾಗಾಗಿ ಎಲ್ಲ ಮನೆಗಳಿಗೆ ಟ್ಯಾಂಕರ್ ನೀರು ಪೂರೈಸಲು ಕೂಡ ಕಷ್ಟವಾಗಿದೆ.
ಇಲ್ಲಿರುವ ಹೊಳೆಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಶಾಶ್ವತ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ. ನಳ್ಳಿ ಮೂಲಕ ಕೊಡುವ ನೀರನ್ನು ಸರಿಯಾದ ಸಮಯಕ್ಕೆ ನೀಡುವಂತಾಗಲಿ. ಟ್ಯಾಂಕರ್ ನೀರನ್ನು ಇನ್ನಷ್ಟು ಹೆಚ್ಚಿಸಲಿ.
ಹೆಚ್ಚಿನ ನೀರು ಪೂರೈಕೆ
ಕೊಡೇರಿ, ಎಡಮಾವಿನ ಹೊಳೆ ಪ್ರದೇಶಕ್ಕೆ ಇನ್ನಷ್ಟು ಹೆಚ್ಚಿನ ನೀರು ಪೂರೈಕೆಗೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. ಪಂಚಾಯತ್‌ಗೆ ಈ ವರೆಗೆ ನೀರಿನ ಸಮಸ್ಯೆ ಕುರಿತಂತೆ ಯಾವುದೇ ದೂರುಗಳು ಬಂದಿಲ್ಲ. ದೂರು ನೀಡಿದರೆ ಕೂಡಲೇ ಪರಿಹರಿಸಲು ಪ್ರಯತ್ನಿಸಲಾಗುವುದು. ಪಂಚಾಯತ್ ಅಧೀನದ ಬೋರ್‌ವೆಲ್ಗಳಲ್ಲಿ ನೀರಿನ ಪ್ರಮಾಣ ಈಗ ಕಡಿಮೆಯಾಗಿರುವುದರಿಂದ ಹೆಚ್ಚುವರಿಯಾಗಿ ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ದಿನಕ್ಕೆ 6-7 ಟ್ಯಾಂಕರ್ ನೀರು ವಿತರಣೆ ಮಾಡುತ್ತಿದ್ದೇವೆ.
-ನವೀನ್ ಕುಮಾರ್, ಕಿರಿಮಂಜೇಶ್ವರ ಪಿಡಿಒ
ಉದಯವಾಣಿ ಆಗ್ರಹವೇನು?
ಇಲ್ಲಿರುವ ಹೊಳೆಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಶಾಶ್ವತ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ. ನಳ್ಳಿ ಮೂಲಕ ಕೊಡುವ ನೀರನ್ನು ಸರಿಯಾದ ಸಮಯಕ್ಕೆ ನೀಡುವಂತಾಗಲಿ. ಟ್ಯಾಂಕರ್ ನೀರನ್ನು ಇನ್ನಷ್ಟು ಹೆಚ್ಚಿಸಲಿ.
ಕ್ರಮ ಕೈಗೊಳ್ಳಲಿ
ಇರುವ ನೀರನ್ನು ಸಮರ್ಪಕವಾಗಿ ಕೊಡಲು ಪಂಚಾಯತ್ ಕ್ರಮ ಕೈಗೊಳ್ಳಲಿ. ಇಲ್ಲಿ 3 ಸುತ್ತಲೂ ಹೊಳೆಯಿದ್ದರೂ, ಈ ರೀತಿ ಕುಡಿಯುವ ನೀರಿನ ಬರ ಬಂದಿರುವುದು ವಿಪರ್ಯಾಸ. ಕೊಡೇರಿ ಭಾಗಕ್ಕೆ ಇನ್ನಷ್ಟು ಹೆಚ್ಚಿನ ನೀರನ್ನು ಪಂಚಾಯತ್‌ನವರು ಪೂರೈಸಲಿ.
-ಗೋಪಾಲ್, ಕೊಡೇರಿ
– ಪ್ರಶಾಂತ್ ಪಾದೆ