Advertisement

ಕೊಡೇರಿ ಸರಕಾರಿ ಶಾಲೆಗೆ ಹೊಸರೂಪ

10:50 AM Feb 14, 2023 | Team Udayavani |

ನಾಗೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ 75 ಸರಕಾರಿ ಶಾಲೆಗೆ ಮೂಲಸೌಕರ್ಯ ಸಹಿತ ಸುಣ್ಣಬಣ್ಣ ಬಳಿಯುವ ಯೋಜನೆಯನ್ನುಹಾಕಿಕೊಂಡಿರುವ ಬೆಂಗಳೂರಿನ “ಕ್ಯಾಂಪಸ್‌ ಟು ಕಮ್ಯೂನಿಟಿ’ ಸಂಸ್ಥೆಯ ಸ್ಕೂಲ್‌ಬೆಲ್‌ ತಂಡದ ಸದಸ್ಯರು ಕಿರಿಮಂಜೇಶ್ವರ ಗ್ರಾಮದ ಕೊಡೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಗೋಡೆಗಳಿಗೆ ನಾನಾ ಬಗೆಯ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಚಿತ್ರಕಲಾವಿದರು, ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳು, ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಸುಮಾರು 50 ಜನರ ತಂಡ ಕೊಡೇರಿ ಶಾಲೆಗೆ ಆಗಮಿಸಿ ಎರಡು ದಿನಗಳ ಕಾಲ ಅಲ್ಲಿಯೇ ವಾಸವಿದ್ದು ಶಾಲೆಯ ಎಲ್ಲ ಗೋಡೆಗಳಿಗೆ, ಕೊಠಡಿಯ ಒಳಭಾಗದಲ್ಲಿ ವಿದ್ಯಾರ್ಥಿಗಳ ಕಲಿಕೆ, ಮನೋವಿಕಾಸಕ್ಕೆ ಪೂರಕವಾದ ಚಿತ್ರಗಳನ್ನು ಬಿಡಿಸಿದ್ದಾರೆ.

ಸಮುದ್ರದ ಅಲೆಯ ಜತೆಗೆ ಮೀನಿನ ಹಾರಾಟ, ಹಂಪಿಯ ಕಲ್ಲಿನ ರಥ, ಮೀನು ಮಾರುವ ಮಹಿಳೆ, ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್‌ ಸ್ಟ್ರೈಕ್‌, ಕಂಬಳದ ದೃಶ್ಯ, ಯಕ್ಷಗಾನ, ಜಾನಪದ ಕಲಾಕೃತಿಗಳು, ಹಸುರು ಪರಿಸರ, ಮಕ್ಕಳ ವಿವಿಧ ಚಟುವಟಿಕೆಗಳು, ಭಾರತ, ಕರ್ನಾಟಕದ ಭೂಪಟ ಹೀಗೆ ಹಲವು ಬಗೆಯ ಚಿತ್ರಗಳನ್ನು ಶಾಲೆಯೆ ಹೊರಗೋಡೆಗಳಲ್ಲಿ ಕಲಾವಿದರ ಕೈಚಳಕದಿಂದ ಮೂಡಿಬಂದಿದೆ. ತರಗತಿ ಕೊಠಡಿಯ ಒಳಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ಲೆಕ್ಕಗಳು, ವರ್ಣಮಾಲೆ ಮಾಹಿತಿ, ಮಾನವನ ದೇಹರಚನೆ, ನಾನಾ ಬಗೆಯ ಹಣ್ಣುಗಳು, ಸೌರಮಂಡಲ ಹೀಗೆ ಹತ್ತಾರು ಚಿತ್ರಕಲೆಗಳನ್ನು ಕಾಣಬಹುದಾಗಿದೆ.

ಸ್ಕೂಲ್‌ಬೆಲ್‌ ಯೋಜನಾ ನಿರ್ದೇಶಕ ಮಹೇಶ್‌ ಕೃಷ್ಣಮೂರ್ತಿ, ಸಂಯೋಜಕ ಸಂದೇಶ್‌ ಎಸ್‌., ಸಹ ಸಂಯೋಜಕಿ ಅರ್ಚನಾ ನಾಗ್‌, ಆರ್ಟ್‌ ಮ್ಯಾಟರ್ ಕಾರ್ಯಕ್ರಮ ಸಂಯೋಜಕರಾದ ವೈಷ್ಣವಿ, ಶಾರದಾ ಕೆ.ಎಸ್‌. ಮೊದಲಾದವರ ಮುಂದಾಳತ್ವದಲ್ಲಿ ಶಾಲೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಎರಡು ದಿನಗಳ ಕ್ಯಾಂಪ್‌ ನಡೆಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ಸಾರ್ವಜನಿಕರು ಕ್ಯಾಂಪ್‌ ನಡೆಸಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next