Advertisement
ಕೊಡೇರಿ ಸರಕಾರಿ ಶಾಲೆಗೆ ಹಾಕಲಾದ ತಗಡು ಶೀಟಿನ ಮೇಲ್ಛಾವಣಿಯು ಮಕ್ಕಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಮಳೆಗೆ ವಿಪರೀತ ಶಬ್ದದಿಂದ ತರಗತಿಯಲ್ಲಿ ಶಿಕ್ಷಕರು ಏನು ಹೇಳುತ್ತಿದ್ದಾರೆ, ಯಾವ ಪಾಠ ಮಾಡುತ್ತಿದ್ದಾರೆ ಎಂಬುದೇ ಕೇಳಿಸದಷ್ಟು ಹೊರಗಿನ ಶಬ್ದ. ಬೇಸಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ತರಗತಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಸಮುದ್ರ ತೀರದಲ್ಲೇ ಇರುವುದರಿಂದ ತಗಡು ಶೀಟು ಯಾವಾಗ ಮೈಮೇಲೆ ಬೀಳುವುದೋ ಎಂಬ ಆತಂಕ ಮಕ್ಕಳಿಗೆ ಎದುರಾಗಿದೆ.
Related Articles
Advertisement
ಹೇಳಿ ಕೇಳಿ ಈ ಕೊಡೇರಿ ಶಾಲೆಯಿರುವುದು ಕರಾವಳಿ ತೀರ ಪ್ರದೇಶದಲ್ಲಿ. ಇಲ್ಲಿ ಸದಾ ಗಾಳಿಯಬ್ಬರ ಜೋರಾಗಿರುತ್ತದೆ. ಭಾರೀ ಗಾಳಿಗೆ ತಗಡು ಶೀಟು ಹಾರಿ ಹೋಗುವ ಭೀತಿ ಇದೆ. ಶೀಟು ಹಾಕಿ ಹಲವು ವರ್ಷ ಕಳೆದಿದೆ. ಅದು ಅಲ್ಲದೆ ಇಲ್ಲಿಗೆ ಉತ್ತಮ ಗುಣಮಟ್ಟದ ಶೀಟುಗಳನ್ನು ಅಳವಡಿಸಿಲ್ಲ ಎಂಬ ಆರೋಪವೂ ಇದೆ. ಗಾಳಿ – ಮಳೆಗೆ ಯಾವಾಗ ಹಾರಿ ಹೋಗುವುದೋ ಎನ್ನುವ ಆತಂಕವಿದೆ. ಮಕ್ಕಳು ಉರಿ ಬಿಸಿಲಿಗೆ ಬೆಂದು ಹೋಗುವ ಸ್ಥಿತಿಯಿದೆ.
ಶೀಘ್ರ ಪರಿಹಾರ ಆಗಬೇಕು: ಹಳೇ ವಿದ್ಯಾರ್ಥಿಗಳ ಸಂಘ, ದಾನಿಗಳು, ಸ್ಥಳೀಯರು, ಶಾಲಾ ಮಕ್ಕಳ ಪಾಲಕ, ಪೋಷಕರ ಸಹಕಾರೊಂದಿಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೊಡೇರಿ, ಗಂಗೆಬೈಲು ಸಹಿತವಾಗಿ ಕಿರಿಮಂಜೇಶ್ವರ ಗ್ರಾಮ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ ಸಹಕಾರಿಯಾಗಿದೆ. ವಿಶಾಲವಾದ ಮೈದಾನವೂ ಇದೆ. ಆದರೆ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲಾಗದ ಸ್ಥಿತಿಯಿದೆ. ನಲಿಕಲಿ ಮಕ್ಕಳಿಗೆ ಟೇಬಲ್ ಕುರ್ಚಿ, ತರಗತಿಗೆ ಒಂದು ಟೇಬಲ್, ಪ್ರಯೋಗಾಲಯ ಕೊಠಡಿ, ಗ್ರಂಥಾಲಯ ಕೊಠಡಿ ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕೂಡಲೇ ಒದಗಿಸುವ ಕಾರ್ಯ ಆಗಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಹೆಚ್ಚುವರಿ ಕೊಠಡಿ ಬೇಕು: ತಗಡು ಶೀಟಿನ ಕೊಠಡಿಗಳಿಂದ ಮಕ್ಕಳಿಗೆ ಪಾಠ – ಪ್ರವಚನಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಬೇಸಗೆಯಲ್ಲೂ ಸೆಕೆಯಿಂದ ಕುಳಿತುಕೊಳ್ಳುವುದು ಕಷ್ಟ. ಅದಕ್ಕಾಗಿ ಉತ್ತಮ ಮಕ್ಕಳಿರುವ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಇದು ಶಾಲೆಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಮಕ್ಕಳು ಬರುವಲ್ಲಿ ವರದಾನವಾಗಬಹುದು. – ಸುರೇಶ್ ಖಾರ್ವಿ, ಎಸ್‌ಡಿಎಂಸಿ ಅಧ್ಯಕ್ಷ, ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆ
3 ಲಕ್ಷ ರೂ. ಅನುದಾನ ಕೊಡೇರಿ ಸರಕಾರಿ ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ಈಗಾಗಲೇ 3 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿದೆ. ಮಳೆ ಕಡಿಮೆಯಾದ ಅನಂತರ ಅದನ್ನು ಬಳಸಿಕೊಂಡು, ಶಾಲಾಭಿವೃದ್ಧಿ ಕಾರ್ಯ ಆರಂಭವಾಗಲಿದೆ. ಇನ್ನಷ್ಟು ಹೆಚ್ಚಿನ ಅನುದಾನದ ಬಗ್ಗೆ ಪರಿಶೀಲಿಸಿ, ಗಮನಹರಿಸಲಾಗುವುದು. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು