Advertisement

ಕೊಡೇರಿ: ಅವಧಿ ಮುಗಿದರೂ ಮುಗಿಯದ ಬ್ರೇಕ್‌ ವಾಟರ್‌ ಕಾಮಗಾರಿ

11:03 PM May 31, 2019 | Sriram |

ಕಿರಿಮಂಜೇಶ್ವರ: ಕೊಡೇರಿ ಮೀನುಗಾರಿಕಾ ಬಂದರಿನಲ್ಲಿ ಕಡಲ್ಕೊರೆತ ತಡೆಗಾಗಿ 33 ಕೋ.ರೂ. ವೆಚ್ಚದಲ್ಲಿ 2016 ರಲ್ಲಿ ಆರಂಭಗೊಂಡ ಬ್ರೇಕ್‌ ವಾಟರ್‌ ವಿಸ್ತರಣಾ ಕಾಮಗಾರಿಯ ಗಡುವು ಈ ವರ್ಷದ ಜನವರಿಗೆ ಅಂತ್ಯವಾದರೂ, ಕಾಮಗಾರಿ ಮಾತ್ರ ಇನ್ನು ಅರ್ಧದಷ್ಟು ಕೂಡ ಮುಗಿದಿಲ್ಲ.

Advertisement

ಕೊಡೇರಿಯಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದ ಬ್ರೇಕ್‌ ವಾಟರ್‌ ಕಾಮಗಾರಿಗೆ 33 ಕೋ.ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, 2016 ರ ಡಿ. 22 ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇಲ್ಲಿನ ಬಂದರಿನ ದಕ್ಷಿಣ ಭಾಗ ಹಾಗೂ ಉತ್ತರ ಭಾಗದಲ್ಲಿ ತಲಾ 200 ಮೀಟರ್‌ ಉದ್ದದ ಬ್ರೇಕ್‌ ವಾಟರ್‌ ನಿರ್ಮಾಣ ಯೋಜನೆಯಿದೆ.

ಆದರೆ ಈಗ ದಕ್ಷಿಣ ಭಾಗದ ಕಾಮಗಾರಿ ಮಾತ್ರ ನಡೆಯುತ್ತಿದ್ದು, ಅದು ಕೂಡ 80- 100 ಮೀ. ಅಷ್ಟೇ ಮುಗಿದಿದೆ. ಅಂದರೆ ಈ ವರ್ಷದ ಜನವರಿಗೆ ಕಾಮಗಾರಿ ಮುಗಿಸಲು ಗಡುವು ನೀಡಿದರೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಅರ್ಧ ದಷ್ಟೂ ಕಾಮಗಾರಿ ಮುಗಿಸಿಲ್ಲ ಎನ್ನುವ ಆರೋಪ ಇಲ್ಲಿನ ಮೀನುಗಾರರದ್ದು.

ಹೂಳೆತ್ತಿಲ್ಲ
ಈ 33 ಕೋ.ರೂ. ಅನುದಾನದಲ್ಲಿ ಬಂದರಿನ ಎರಡೂ ಬದಿಯ ಬ್ರೇಕ್‌ ವಾಟರ್‌ ಮಧ್ಯದಲ್ಲಿರುವ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯಬೇಕು ಎನ್ನುವ ಕರಾರು ಕೂಡ ಆಗಿದೆ. ಆದರೆ ಈವರೆಗೆ ಹೂಳು ತೆಗೆಯಲು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಮುಂದಾಗಿಲ್ಲ.

ಮೀನುಗಾರರಿಗೆ ಸಮಸ್ಯೆ
ಬ್ರೇಕ್‌ ವಾಟರ್‌ ಕಾಮಗಾರಿ ಮುಗಿಯದೇ ಇರುವುದರಿಂದ, ಅದಲ್ಲದೆ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯದ ಕಾರಣ, ಮೀನುಗಾರರು ಸಮಸ್ಯೆ ಎದುರಿಸಲಿದ್ದಾರೆ. ಕೊಡೇರಿಯಲ್ಲಿ 9-10 ಮಾಟು ಬಲೆ ಜೋಡಿ, 100 ಕ್ಕೂ ಮಿಕ್ಕಿ ದೋಣಿಗಳಿದ್ದು, ಸುಮಾರು 400 – 500 ಮೀನುಗಾರರು ಇಲ್ಲಿದ್ದಾರೆ. ಇದು ಸಹಜ ಬಂದರು ಆಗಿರುವುದರಿಂದ ಉಪ್ಪುಂದ ಭಾಗದವರು ಇಲ್ಲಿಗೆ ಬರುತ್ತಾರೆ. ಇವರಿಗೆಲ್ಲ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಸಮಸ್ಯೆಯಾಗಲಿದೆ.

ನೋಟಿಸ್‌ ಕೊಟ್ಟಿದ್ದೇವೆ

ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಯ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಗಮನದಲ್ಲಿದ್ದು, ಈ ಬಗ್ಗೆ ನಾವು ವಿಸ್ತೃತವಾದ ವರದಿ ತಯಾರಿಸಿ, ಅದನ್ನು ಮೇಲಾಧಿಕಾರಿಗಳಿಗೆ ಕಳುಹಿಸಿದ್ದೇವೆ. ಮೀನುಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆಯೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಜತೆಗೆ ಕಾಮಗಾರಿ ವಹಿಸಿಕೊಂಡವರಿಗೂ ನೋಟಿಸ್‌ ನೀಡಲಾಗಿದೆ.
-ಉದಯ ಕುಮಾರ್‌, ಎಇಇ, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

ದೂರು ನೀಡಿದರೂ ಪ್ರಯೋಜನವಿಲ್ಲ

ಬ್ರೇಕ್‌ ವಾಟರ್‌ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ನಾವು ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಅವಧಿ ಮುಗಿದಿದೆ. ಇನ್ನು ಕೂಡ ಸ್ವಲ್ಪವೂ ಕಾಮಗಾರಿ ಆಗಿಲ್ಲ. ಒಂದು ಭಾಗದಲ್ಲಿ ಮಾತ್ರ ಕಾಮಗಾರಿ ಆಗಿದ್ದು, ಮತ್ತೂಂದು ಕಡೆ ಹಾಗೆಯೇ ಇದೆ. ಗುತ್ತಿಗೆ ವಹಿಸಿಕೊಂಡವರಿಗೆ ಕೇಳಿದರೆ ಎಲ್ಲ ಅನುದಾನ ಸಿಕ್ಕಿಲ್ಲ ಅನ್ನುತ್ತಾರೆ. ಅಧಿಕಾರಿಗಳಿಗೆ ಕೇಳಿದರೆ ಅನುದಾನ ಎಲ್ಲ ಮಂಜೂರಾಗಿದೆ ಎನ್ನುತ್ತಾರೆ.
-ಗೋಪಾಲ್ ಕೊಡೇರಿ, ಮೀನುಗಾರರು
-ಪ್ರಶಾಂತ್‌ ಪಾದೆ
Advertisement
Advertisement

Udayavani is now on Telegram. Click here to join our channel and stay updated with the latest news.

Next