ಮಡಿಕೇರಿ : ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಈ ಬಾರಿ “”ಕೊಡವ ನಮ್ಮೆ”ಯನ್ನು ಅಕ್ಟೋಬರ್ 12 ಮತ್ತು 13 ರಂದು ಅರ್ಥಪೂರ್ಣವಾಗಿ ಆಚರಿಸಲು ಒಕ್ಕೂಟದ ಮಾಸಿಕ ಸಭೆ ನಿರ್ಧರಿಸಿದೆ.
ಬಾಳುಗೋಡು ಕೊಡವ ಸಮಾಜದ ಸಭಾಂಗಣದಲ್ಲಿ ಒಕ್ಕೂಟದ ಮಾಸಿಕ ಸಭೆ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡವ ನಮ್ಮೆಯನ್ನು ಈ ಬಾರಿ ಮೂರು ದಿನಗಳಿಗೆ ಬದಲಾಗಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಯಿತು.
ಹಾಕಿ ಮೈದಾನದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಈ ಬಾರಿ ಹಾಕಿ ಆಟಕ್ಕೆ ಬದಲಾಗಿ ಬೇರೆ ಕ್ರೀಡೆಗಳನ್ನು ನಡೆಸುವುದು ಮತ್ತು 2020ರಲ್ಲಿ ಮುಕ್ಕಾಟಿರ (ಹರಿಹರ) ಕುಟುಂಬದವರು ನಡೆಸುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಒಕ್ಕೂಟದ ಮೂಲಕ ಸಂಪೂರ್ಣ ಸಹಕಾರ ನೀಡಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಭೆ ತೀರ್ಮಾನಿಸಿತು.
ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರು ಮಾತನಾಡಿ ಕೊಡವ ಸಮಾಜ ಹಾಲ್‌ನ ಬಾಡಿಗೆಯನ್ನು ಏರಿಕೆ ಮಾಡಿರುವುದರಿಂದ ಜನಾಂಗದ ಕುಟುಂಬಗಳಿಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಹಿಂದಿನ ನಿರ್ಧಾರದಂತೆ ವಿವಾಹ ಸಮಾರಂಭಕ್ಕೆ 1 ಲಕ್ಷದ 4 ಸಾವಿರ ಬಾಡಿಗೆ ವಸೂಲಿಗೆ ಸಲಹೆ ನೀಡಿದರು. ಗೆಸ್ಟ್ ರೂಂಗೆ 2 ಸಾವಿರ ಮತ್ತು 8 ರೂಮ್‌ಗಳಿಗೆ 16 ಸಾವಿರ ರೂ. ನಿಗದಿ ಮಾಡಲು ತಿಳಿಸಿದರು. ಮಾಜಿ ಅಧ್ಯಕ್ಷ ದಾದಬೆಳ್ಳಿಯಪ್ಪ ಅವರು ಮಾತನಾಡಿ, ಸರಕಾರದಿಂದ ಈಗಾಗಲೇ 5 ಕೋಟಿ ರೂ.ಗಳನ್ನು ಘೋಷಿಸಲಾಗಿದ್ದು, ಕ್ರೀಡಾಂಗಣದ ಕಾಮಗಾರಿಯನ್ನು ಮುಂದಿನ ತಿಂಗಳಿ ನಿಂದಲೇ ಆರಂಭಿಸಲಾಗುವುದು ಎಂದರು. ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಂಕುಸ್ಥಾಪನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾ ರಸ್ವಾಮಿ ಅವರನ್ನು ಆಹ್ವಾನಿಸಲಾಗುವುದು ಎಂದರು.
ಉಪಾಧ್ಯಕ್ಷ ಮಲಚ್ಚೀರ ಬೋಸ್ ಬೆಳ್ಯಪ್ಪ, ಖಜಾಂಚಿ ಚಿರಿಯಪಂಡ ಕಾಶಿ ಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಬೆಳ್ಳಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸದಸ್ಯ ಮೇರಿಯಂಡ ಸಿ.ನಾಣಯ್ಯ ಸಭೆಯಲ್ಲಿ ಉಪಸ್ಥಿತರಿದ್ದರು.