Advertisement

ಕೊಡಂಗಳ ಮರ್ಣೆ: 14ನೇ ಶತಮಾನದ ಆಳುಪ ಶಾಸನ ಪತ್ತೆ

12:30 AM Dec 29, 2018 | Team Udayavani |

ಶಿರ್ವ: ಮೂಡುಬೆಳ್ಳೆ ಸಮೀಪದ ಕೊಡಂಗಳ-ಮರ್ಣೆಯ ಕೊಲಪು ಮಹಾವಿಷ್ಣುಮೂರ್ತಿ ದೇವಾಲಯದ ಹೊರ ಪ್ರಾಕಾರದಲ್ಲಿ ತ್ರಿಕೋನಾಕಾರದಲ್ಲಿರುವ ಒಂದು ವಿಶಿಷ್ಟ ಶಾಸನ ಕಲ್ಲು ಪತ್ತೆಯಾಗಿದೆ. 

Advertisement

ಶಾಸನದ ಮೇಲ್ಭಾಗದಲ್ಲಿ   ಒಂದು  ಶಿವಲಿಂಗ, ಎಡ-ಬಲದಲ್ಲಿ ಎರಡು ದೀಪದ ಕಂಭಗಳು ಹಾಗೂ ನಂದಿಯ ಅಸ್ಪಷ್ಟ ಶಿಲ್ಪದ ಚಿತ್ರಣವಿದ್ದು ಮೇಲೆ ಸೂರ್ಯ-ಚಂದ್ರರ ಉಬ್ಬು ಶಿಲ್ಪಗಳಿವೆ.

ಸುಮಾರು 19 ಸಾಲುಗಳ ಬರಹವನ್ನು ಹೊಂದಿರುವ ಈ ಶಾಸನದಲ್ಲಿ ಕೆಳಭಾಗದಲ್ಲಿನ 7 ಸಾಲುಗಳ ಬರಹ ಅಸ್ಪಷ್ಟವಾಗಿ ಗೋಚರಿಸುತ್ತದೆ. ಮೇಲಿನ ಭಾಗದಲ್ಲಿರುವ ಬರಹ ಸಂಪೂರ್ಣ ಅಳಿಸಿ ಹೋಗಿದೆ. ಶಾಸನೋಕ್ತ ವಿಷಯದ ಪ್ರಕಾರ ಇದೊಂದು ದಾನ ಶಾಸನವೆಂದು ಸ್ಪಷ್ಟವಾಗುತ್ತದೆ ಎಂದು ಶಿರ್ವ ಎಂ.ಎಸ್‌.ಆರ್‌.ಎಸ್‌. ಕಾಲೇಜು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ|ಟಿ.ಮುರುಗೇಶಿ ತಿಳಿಸಿದ್ದಾರೆ.

ಶಾಸನದಲ್ಲಿ ದೇವಾಲಯದ ಅಧಿಕಾರಿಯನ್ನು ಉಲ್ಲೇಖೀಸಲಾಗಿದೆ. ಆಳುಪರ ಇತರೆ ಶಾಸನಗಳಲ್ಲಿ  ಅಧಿಕಾರಿಗಳ ಉಲ್ಲೇಖ ಕಂಡುಬರುತ್ತದೆ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ 14ನೇ ಶತಮಾನದ ಶಾಸನವೆಂದು ಕಾಲವನ್ನು ನಿರ್ಣಯಿಸಬಹುದಾಗಿದೆ. ಶಾಸನದ ಕೆಳಭಾಗದಲ್ಲಿ ಎದುರು-ಬದುರಾಗಿ ನಿಂತ ಎರಡು ಕರುಗಳ ಉಬ್ಬು ಶಿಲ್ಪಗಳನ್ನು ಚಿತ್ರಿಸಲಾಗಿದೆ.

ಶಾಸನದ ಮಹತ್ವ
ಶಾಸನ ಇರುವ ದೇವಾಲಯವನ್ನು ಈಗ ಕೊಲಪು ಮಹಾವಿಷ್ಣುಮೂರ್ತಿ ದೇವಾಲಯವೆಂದು ಕರೆಯಲಾಗುತ್ತಿದೆ. ಶಾಸನೋಕ್ತ ಅಧಿಕಾರಿಯ ಉಲ್ಲೇಖ ಮೂಲತಃ ಈ ದೇವಾಲಯ ಜೈನ ಅಧಿಕಾರಿಗಳ ಆಡಳಿತಕ್ಕೊಳಪಟ್ಟಿತ್ತೆಂದು ಸ್ಪಷ್ಟಪಡಿಸುತ್ತದೆ. ಪ್ರಸ್ತುತ ದೇವಾಲಯದಲ್ಲಿನ ಮಹಾವಿಷ್ಣುಮೂರ್ತಿ 17ನೇ ಶತಮಾನದ ಶಿಲ್ಪ ಶೈಲಿಯನ್ನು ಹೊಂದಿದೆ. ಆದ್ದರಿಂದ ಪ್ರಸ್ತುತ ದೇವಾಲಯ ಮೂಲತಃ ಶೈವ ದೇವಾಲಯವಾಗಿದ್ದು,ಜೈನರ ಆಡಳಿತೆಗೆ ಒಳಪಟ್ಟ ದೇವಾಲಯ ಆಗಿತ್ತು. ಅನಂತರ ವೈಷ್ಣವರ ಅಧೀನಕ್ಕೆ ಒಳಪಟ್ಟು, ಮಹಾವಿಷ್ಣುಮೂರ್ತಿ ದೇವಾಲಯವಾಗಿ ಮಾರ್ಪಟ್ಟಿದೆ ಎಂಬ ಅಂಶದ ಮೇಲೆ ಈ ಶಾಸನ ಬೆಳಕು ಚೆಲ್ಲುತ್ತದೆ. ಈ ಶಾಸನ ಅಧ್ಯಯನದಲ್ಲಿ  ವೆಂಕಟೇಶ್‌ ಭಟ್‌, ಅರ್ಚಕರಾದ ಪುಂಡರೀಕಾಕ್ಷ ಆಚಾರ್ಯ, ಬ್ರಹ್ಮಾವರ ಎಸ್‌.ಎಂ.ಎಸ್‌. ಕಾಲೇಜಿನ ಪ್ರಶಾಂತ್‌ ಶೆಟ್ಟಿ  ಸಹಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next