ಕೊಡಿಯಾಲಬೈಲ್: ವಾಹನ ದಟ್ಟಣೆ, ಜನಸಂಚಾರ ಹೆಚ್ಚಾಗಿರುವ ನಗರದ ಕೊಡಿಯಾಲಬೈಲ್ ಮತ್ತು ಹಂಪನಕಟ್ಟೆ ಸಂಪರ್ಕಿಸುವ ಕಾರ್ನಾಡ್ ಸದಾಶಿವ ರಾವ್ (ಕೆ.ಎಸ್.ರಾವ್) ರಸ್ತೆಯ ಅಭಿವೃದ್ಧಿಯಾಗಿದ್ದರೂ ಈ ರಸ್ತೆಯ ಕೆಲವು ಕಡೆ ಫುಟ್‌ಪಾತ್ ಇಲ್ಲದೆ ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.
ಮಂಜೇಶ್ವರ ಗೋವಿಂದ ಪೈ ವೃತ್ತದಿಂದ(ನವಭಾರತ ವೃತ್ತ) ಹಂಪನಕಟ್ಟೆ ಜಂಕ್ಷನ್‌ವರೆಗಿನ ಸುಮಾರು ಒಂದು ಕಿ.ಮೀ ಉದ್ದದ ಈ ರಸ್ತೆಯಲ್ಲಿ ಮಾಲ್, ಬ್ಯಾಂಕ್, ಸಿನೆಮಾ ಮಂದಿರ, ಆಸ್ಪತ್ರೆ ಸೇರಿದಂತೆ ವಾಣಿಜ್ಯ, ಸೇವಾ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿ ಜನರ ಓಡಾಟವೂ ಹೆಚ್ಚು. ಆದರೆ ಈ ರಸ್ತೆಯ ಹಲವೆಡೆ ಫುಟ್‌ಪಾತ್ ಇಲ್ಲದೆ ಪಾದಚಾರಿಗಳು ರಸ್ತೆಯಲ್ಲಿಯೇ ಅಪಾಯಕಾರಿಯಾಗಿ ನಡೆದುಕೊಂಡು ಹೋಗಬೇಕಾಗಿದೆ.
ಮಂಜೇಶ್ವರ ಗೋವಿಂದ ಪೈ ವೃತ್ತದಿಂದ ಹಂಪನಕಟ್ಟೆ ಕಡೆಗೆ ಹೋಗುವಲ್ಲಿ ಬಲಬದಿಯಲ್ಲಿ ಗೋಲ್ಡ್ ಪ್ಯಾಲೇಸ್‌ನಿಂದ ಶರವು ಕ್ರಾಸ್ ರಸ್ತೆಯವರೆಗೂ ಫುಟ್‌ಪಾತ್ ಇಲ್ಲ. ಇಲ್ಲಿ ಕೆಲವೆಡೆ ಫುಟ್‌ಪಾತ್‌ಗಾಗಿ ಮೀಸಲಿಟ್ಟ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇನ್ನು ಕೆಲವೆಡೆ ರಸ್ತೆ ಮಾತ್ರವಿದೆ.
ಪಾದಚಾರಿಗಳು ಕೂಡ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕು. ಇದು ಭಾರೀ ವಾಹನ ದಟ್ಟಣೆಯ ರಸ್ತೆಯಾಗಿರುವುದರಿಂದ ಅಪಾಯವೂ ಹೆಚ್ಚು. ಇನ್ನೊಂದು ಬದಿಯಲ್ಲಿ ಗಿರಿಯಾಸ್‌ನಿಂದ ಹಂಪನಕಟ್ಟೆ ಸಿಗ್ನಲ್‌ವರೆಗೆ ಫುಟ್‌ಪಾತ್ ಇಲ್ಲ. ರಸ್ತೆಯ ಅಂಚಿನಲ್ಲೇ ಅಪಾಯಕಾರಿ ನಡಿಗೆ ಅನಿವಾರ್ಯವಾಗಿದೆ. ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವುದರಿಂದ ಪಾದಚಾರಿಗಳಿಗೆ ವಾಹನಗಳು ಢಿಕ್ಕಿ ಹೊಡೆಯುವ ಅಪಾಯ ಮಾತ್ರವಲ್ಲದೆ, ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಬಸ್ ತಂಗುದಾಣ ಬಳಿಯೂ ಇಕ್ಕಟ್ಟು
ಹಂಪನಕಟ್ಟೆ ಕಡೆಯಿಂದ ಪಿವಿಎಸ್ ಕಡೆಗೆ ಸಂಚರಿಸುವ ಬಸ್‌ಗಳು ನಿಲುಗಡೆಯಾಗುವ ಕೆ.ಎಸ್.ರಾವ್ ರಸ್ತೆಯ ಶರವು ಕ್ರಾಸ್ ರಸ್ತೆ ಸಮೀಪದ ಬಸ್ ತಂಗುದಾಣದ ಬಳಿ ಪಾದಚಾರಿಗಳು ನಡೆದಾಡುವುದಕ್ಕೆ ಭಾರಿ ಪ್ರಯಾಸ ಪಡುವ ಸ್ಥಿತಿ ಇದೆ. ಒಂದೋ ಪಾದಚಾರಿಗಳು ಬಸ್ ನಿಲ್ದಾಣದೊಳಗಿಂದ ಪ್ರಯಾಣಿಕರ ನಡುವೆ ನುಸುಳಿಕೊಂಡು ಹೋಗಬೇಕು, ಇಲ್ಲವಾದರೆ ರಸ್ತೆಯ ನಡುವೆ ವಾಹನಗಳ ಮಧ್ಯೆ ಜೀವಭಯದಲ್ಲಿ ನಡೆಯಬೇಕು!.