Advertisement

ಕೊಡಗು: ಮತ್ತೆರಡು ದಿನ “ರೆಡ್‌ ಅಲರ್ಟ್‌’

01:36 AM Aug 11, 2019 | Sriram |

ಮಡಿಕೇರಿ: ಪ್ರವಾಹದಿಂದ ಕಂಗೆಟ್ಟಿರುವ ಕೊಡಗು ಜಲ್ಲೆಗೆ ಮತ್ತೂಂದು ಶಾಕ್‌ ಎದುರಾಗಿದ್ದು, ಆಗಸ್ಟ್‌ 12ರ ಬೆಳಗ್ಗೆ 8.30ರ ವರೆಗೆ ಪ್ರತಿದಿನ 204 ಮಿ.ಮೀ.ಗಿಂತ ಅಧಿಕ ಮಳೆ ಬೀಳುವ ಸಾಧ್ಯತೆಗಳಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಿಸಿದೆ.

Advertisement

ಜಿಲ್ಲೆಯ 67 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭೂ ಕುಸಿತದಿಂದ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಭಾಗಮಂಡಲದ ಕೋರಂಗಾಲ ಹಾಗೂ ವೀರಾಜಪೇಟೆಯ ತೋರ ಗ್ರಾಮದಲ್ಲಿ ಭಾರೀ ಭೂ ಕುಸಿತ ಉಂಟಾಗಿ 7 ಮಂದಿ ಮೃತಪಟ್ಟು 8 ಮಂದಿ ನಾಪತ್ತೆಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 40 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 4,631 ಮಂದಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಬೆಟ್ಟ, ಗುಡ್ಡ ನದಿ ತೀರದ ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವಂತೆ ತಿಳಿಸಿರುವ ಅವರು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತ ಕಾರ್ಯಾಚರಣೆಗೆ ಇಳಿದಾಗ ಸಾರ್ವಜನಿಕರು ರಕ್ಷಣಾ ತಂಡದೊಂದಿಗೆ ಸಹಕರಿಸಬೇಕೆಂದು ಕೋರಿಕೊಂಡಿದ್ದಾರೆ.ತುರ್ತು ಸೇವೆಗೆ ಟೋಲ್‌ ಫ್ರೀ ಸಂಖ್ಯೆ 08272-221077, ವಾಟ್ಸ್‌ ಅಪ್‌- 8550001077 ಸಂಪರ್ಕಿಸಬಹುದು.

ಸಮಾಧಿಯಾದ 8 ಇನ್ನೂ ಪತ್ತೆಯಿಲ್ಲ
ವೀರಾಜಪೇಟೆಯ ತೋರ ಗ್ರಾಮದಲ್ಲಿ ಶುಕ್ರವಾರ ಗುಡ್ಡ ಕುಸಿದು ನಾಪತ್ತೆಯಾಗಿದ್ದ 8 ಮಂದಿ ಇನ್ನೂ ಪತ್ತೆಯಾಗಿಲ್ಲ. ಅವರೆಲ್ಲ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಶಂಕೆ ಮೂಡಿದೆ. ಪ್ರತೀಕೂಲ ಹವಾಮಾನದ ಕಾರಣ ಸೇನಾಪಡೆ ಮತ್ತು ಎನ್‌ಡಿಆರ್‌ಎಫ್ ತಂಡಕ್ಕೆ ಕಾರ್ಯಾಚರಣೆ ಕಷ್ಟವಾಗುತ್ತಿದೆ.

Advertisement

ದಕ್ಷಿಣ ಕೊಡಗಿನ ಬಹುತೇಕ ಎಲ್ಲ ತೋಟ ಹಾಗೂ ಗದ್ದೆಗಳು ಮುಳುಗಡೆಯಾಗಿವೆ. ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ ಭಾಗದಲ್ಲಿ ಪ್ರವಾಹದ ನೀರು ಏರಿಕೆಯಾಗುತ್ತಿದ್ದು, ನೂರಾರು ಮನೆಗಳು ನೀರಿನಲ್ಲಿ ಮುಳುಗಿವೆ.

ತಲಕಾವೇರಿ, ಭಾಗಮಂಡಲದಲ್ಲಿ ಶನಿವಾರ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದ್ದು, ಶ್ರೀ ಭಗಂಡೇಶ್ವರ‌ ದೇಗುಲದ ಗರ್ಭಗುಡಿ ಆವರಿಸಿದ್ದ ಪ್ರವಾಹದ ನೀರು ತಗ್ಗಿದೆ.

ಬ್ಯಾಂಕ್‌ ಮುಳುಗಡೆ
ಕೊಂಡಂಗೇರಿಯಲಿ ಬ್ಯಾಂಕೊಂದು ಮುಳುಗಡೆಯಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಮಿತಿ ಮೀರಿ ಮಳೆಯಾಗುತ್ತಿದ್ದು, ಕೊಟ್ಟಮುಡಿ ಭಾಗದಲ್ಲಿ ಕೃಷಿ ಭೂಮಿ ಸೇರಿದಂತೆ ಮನೆಗಳು ಜಲಾವೃತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next