ಮೈಸೂರು: 2018ರ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಯಿಂದ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಜ.11ರಿಂದ ಮೂರು ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ ತಿಳಿಸಿದರು.
ಮೈಸೂರು ಹೋಟೆಲ್ ಮಾಲಿಕರ ಸಂಘ ಹಾಗೂ ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ ಹೊರತಂದಿರುವ ವಿವಿಧ ಪ್ರವಾಸಿತಾಣಗಳ ಚಿತ್ರಸಹಿತ ಮಾಹಿತಿಯುಳ್ಳ 2019ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೈಸೂರು ನಗರಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೇ ಸೀಮಿತಗೊಳ್ಳದೆ, ಮೈಸೂರನ್ನು ಸರ್ಕ್ನೂಟ್ ಆಗಿ ಇಟ್ಟುಕೊಂಡು ಮಂಡ್ಯ, ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳಿಗೂ ಹೋಗಿ ಬರುತ್ತಾರೆ. ಹೀಗಾಗಿ ಕೊಡಗು ಪ್ರವಾಸಿ ಉತ್ಸವ ಆಯೋಜಿಸುತ್ತಿರುವುದರಿಂದ ಮಹಾ ಮಳೆಯಿಂದ ತತ್ತರಿಸಿರುವ ಕೊಡಗಿನ ಹೋಟೆಲ್ ಉದ್ಯಮ, ಹೋಂ ಸ್ಟೇಗಳು ಸೇರಿದಂತೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಈ ಉತ್ಸವದಿಂದ ಕೊಡಗು ಸುತ್ತಮುತ್ತಲಿನ 100 ಕಿ.ಮೀ. ವ್ಯಾಪ್ತಿಯ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಭೇಟಿ ನೀಡುವಂತಾಗುತ್ತದೆ. ಕೊಡಗು ಉತ್ಸವ ನಡೆಸುವ ಬಗ್ಗೆ ತೀರ್ಮಾನವಾಗಿದ್ದು, ಉತ್ಸವದ ಅಂತಿಮ ರೂಪುರೇಷೆ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕೊಡಗಿಗೆ ಒಂದು ದಿನದ ಟೂರ್ ಪ್ಯಾಕೇಜ್ ನಿಯಮಿತವಾಗಿ ನಡೆಯುತ್ತಿದೆ ಎಂದರು.
ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, ಮೈಸೂರು ನಗರಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರು, ನಮ್ಮ ವ್ಯಾಪಾರಿ ಕೇಂದ್ರಗಳಾದ ಹೋಟೆಲ್, ಉಪಾಹಾರ ಗೃಹ, ಸ್ವೀಟ್ಸ್, ಬೇಕರಿಗಳಿಗೆ ಭೇಟಿ ನೀಡಿದಾಗ ಈ ರೀತಿಯ ಕ್ಯಾಲೆಂಡರ್ ನೋಡಿದಾಗ ಪ್ರವಾಸಿ ತಾಣಗಳು ಹೆಚ್ಚಿನ ಪ್ರಚಾರ ಪಡೆಯುತ್ತವೆ ಎಂಬ ಉದ್ದೇಶದಿಂದ ಈ ಕ್ಯಾಲೆಂಡರ್ ಮಾಡಿಸಲಾಗಿದ್ದು, ಈ ಕ್ಯಾಲೆಂಡರ್ 12 ತಿಂಗಳುಗಳಲ್ಲಿ ವಿವಿಧ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ,
ಬಂದಿ, ಅರಮನೆ ಬಲರಾಮ ದ್ವಾರದಿಂದ ಚಾಮರಾಜ ವೃತ್ತ, ಮೈಸೂರು ಜಿಲ್ಲೆಯ ಪ್ರತಿಷ್ಠಿತ ಜಾತ್ರೆಗಳು, ಹಳ್ಳಿಗಳ ರೈತರ ಸಾಂಸ್ಕೃತಿಕ ಚಿತ್ರಗಳು, ಶ್ರೀರಂಗಪಟ್ಟಣದ ಪ್ರವಾಸಿ ಸ್ಥಳಗಳು, ಬೃಂದಾವನ, ಸೋಮನಾಥಪುರ ದೇವಸ್ಥಾನ, ಗಗನಚುಕ್ಕಿ-ಭರಚುಕ್ಕಿ ಜಲಪಾತ, ಅರಮನೆಯ ಖಾಸಗಿ ದಸರಾ, ಕೊಡಗು ಜಿಲ್ಲೆ, ಬೈಲಕುಪ್ಪೆ ಟಿಬೇಟಿಯನ್ ಕ್ಯಾಂಪ್, ದುಬಾರೆ ಆನೆ ಶಿಬಿರ ಮತ್ತು ಬೆಳದಿಂಗಳ ರಾತ್ರಿಯ ಮೈಸೂರು ಅರಮನೆ ಚಿತ್ರಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.
ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರೀ, ಉಪಾಧ್ಯಕ್ಷ ಸುರೇಶ್ ಉಗ್ರಯ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ತಂತ್ರಿ, ಜಂಟಿ ಕಾರ್ಯದರ್ಶಿ ಕುಮಾರ್, ಖಜಾಂಚಿ ಭಾಸ್ಕರ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.