ಕೊಡಗು: ದೇಶದ್ಯಾಂತ ಕೋವಿಡ್-19 ಪ್ರಕರಣಗಳು ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾರಣ, ರಾಜ್ಯದ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ನಡುವೆ ಸಂಚರಿಸುವ ವಾಹನ ಮತ್ತು ಅದರಲ್ಲಿ ಬರುವ ಪ್ರಯಾಣಿಕರು ಹಾಗೂ ಕಾಲು ನಡಿಗೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಕರೋನಾ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.
ಸೋಮವಾರ ಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಬಿ.ವಿ. ಹರೀಶ್ ಕುಮಾರ್ ಹಾಗು ಆರೋಗ್ಯ ಇಲಾಖೆಯ ನಾಗೇಂದ್ರ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು ಈ ವೇಳೆ ಸಂಜೆ ಸುಮಾರು 4.45 ಗಂಟೆಗೆ, ಕೇರಳ ರಾಜ್ಯ ಕಡೆಯಿಂದ ಬಂದ KA-12-B-4623 ನೋಂದಣಿಯ ಒಂದು ಗೂಡ್ಸ್ ವಾಹನ ಪರಿಶೀಲಿಸಿದ್ದು ಲಾರಿಯಲ್ಲಿದ್ದ ಚಾಲಕ ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಜಂಶೀರ್ ಎಂಬಾತನು ತೋರಿಸಿದ ಕರ್ನಾಟಕ ಸರಕಾರದ ಕೋವಿಡ್ ಆರ್ ಟಿಪಿಸಿಆರ್ (RTPCR )ನೆಗೆಟಿವ್ ವರದಿಯನ್ನು ಅದರ ಸಂಖ್ಯೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದಾಗ ಆ ವರದಿ ನಕಲಿ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಚಾಲಕ ಜಂಶೀರ್ ನನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ : ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಲು ತೀರ್ಮಾನ: ಬೊಮ್ಮಾಯಿ
ವಿಚಾರಣೆ ವೇಳೆ ಆರ್ ಟಿಪಿಸಿಆರ್ ವವರದಿಯನ್ನು ಸಿದ್ದಾಪುರದ ಪತ್ರಿಕೆ ವರದಿಗಾರನೊಬ್ಬ ಕೇರಳಕ್ಕೆ ಪ್ರಯಾಣಿಸುವವರಿಗೆ ಆತನ ಸ್ಟುಡಿಯೋದಲ್ಲಿಯೇ ಆರ್ ಟಿಪಿಸಿಆರ್ ವರದಿಯನ್ನು ತಯಾರಿಸಿ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಅದರಂತೆ ಕೂಡಲೇ ಕಾರ್ಯಪ್ರವೃತ್ತರಾದ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ ಮಾದಪ್ಪ ಹಾಗು ಸಿಬ್ಬಂದಿಯವರು ಸಿದ್ದಾಪುರದ ಪತ್ರಕರ್ತನನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.