Advertisement
ಚೆಂಬು ವೃತ್ತದ ಊರುಬೈಲು, ಚೆಂಬು, ದಬ್ಬಡ್ಕ, ಮೇಲ್ ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ದಬ್ಬಡ್ಕ ಭಾಗದಲ್ಲಿ ಜಲಸ್ಫೋಟದೊಂದಿಗೆ ಗುಡ್ಡ ಕುಸಿಯುತ್ತಲೇ ಇದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮನೆ ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಭಾಗದಲ್ಲೂ ಬೃಹತ್ ಬರೆ ಕುಸಿದಿದ್ದು, ಮಣ್ಣು ತೆರವು ಸಂದರ್ಭ ಜೆಸಿಬಿ ಯಂತ್ರ ಮಗುಚಿದ ಘಟನೆಯೂ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಹಾನಿಯಾಗಿದೆ. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 34 ಮಂದಿ ಸ್ಥಳಾಂತರಗೊಂಡಿದ್ದಾರೆ. ಸಂತ್ರಸ್ತರಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ವಿತರಿಸಿದರು.
Related Articles
ಮಡಿಕೇರಿ ನಗರದಲ್ಲಿ ಎರಡು ಮನೆಗಳ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮಣ್ಣು ಜರಿಯುತ್ತಲೇ ಇರುವುದರಿಂದ ಮನೆಗಳು ಬೀಳುವ ಹಂತದಲ್ಲಿವೆ. ತಿತಿಮತಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೋಮವಾರಪೇಟೆ ರಸ್ತೆಯಲ್ಲೂ ಮರ ಬಿದ್ದು ವಾಹನ ಸಂಚಾರ ವ್ಯತ್ಯಯಗೊಂಡಿತ್ತು.
Advertisement
ಸಂಪಾಜೆಯಲ್ಲಿ ಮಳೆ ಕಡಿಮೆಪ್ರವಾಹದಲ್ಲಿ ಮುಳುಗಿದ್ದ ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಕೊಯನಾಡು ಮತ್ತು ದೇವರಕೊಲ್ಲಿ ಬಳಿ ರಸ್ತೆಗೆ ಹಾನಿಯಾಗಿರುವುದರಿಂದ ಬಸ್, ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬರೆ ಬಿದ್ದು ಹಾನಿ ಅಪಾಯದಂಚಿನಲ್ಲಿ ಮನೆ
ಚೆಟ್ಟಳ್ಳಿ : ಭಾರೀ ಮಳೆಗೆ ಬರೆ ಮತ್ತು ಮರ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್ ಮೊಟ್ಟೆಯಲ್ಲಿ ಸಂಭವಿಸಿದೆ. ಅಜೀಜ್ ಅವರ ಮನೆಯ ಹಿಂಬದಿಯ ಬರೆ ಕುಸಿದ ಪರಿಣಾಮ ಬರೆಯಲ್ಲಿದ್ದ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ಮನೆಯ ಹಿಂಬದಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಮನೆಯಲ್ಲಿದ್ದವರನ್ನು ಪೊನ್ನತ್ ಮೊಟ್ಟೆ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.