Advertisement
ಸುಂಟಿಕೊಪ್ಪದ ಅರೇಬಿಕ್ ಮದ್ರಸಾ ವ್ಯಾಪ್ತಿಯ ಬಹುತೇಕ ಮುಸ್ಲಿಂ ಕುಟುಂಬಗಳು ಮಕ್ಕಂದೂರು, ಹಾಲೇರಿ, ಮುಕ್ಕೊಡ್ಲು, ಅಕ್ಕಿಹೊಳೆ ಭಾಗದ ನೆರೆ ಸಂತ್ರಸ್ತರೊಂದಿಗೆ ಸಹ ಭೋಜನ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಬಕ್ರೀದ್ ಆಚರಿಸಿಕೊಂಡರು.
ಮದ್ರಸಾದ ಉಸ್ತುವಾರಿಯಲ್ಲಿ ನಡೆಯುತ್ತಿರುವ ನಿರಾಶ್ರಿತರ ಶಿಬಿರದಲ್ಲಿ 575 ಮಂದಿ ಆಶ್ರಯ ಪಡೆದಿದ್ದು ಇಲ್ಲಿ ಇರುವ ಎಲ್ಲರಿಗೂ ಮದ್ರಸಾದಿಂದಲೇ ಊಟ ಹಾಗೂ ಇತರೆ ಸೌಲಭ್ಯ ಮಾಡಿಕೊಡಲಾಗಿದೆ. ವಿಶೇಷವೆಂದರೆ ಈ ನಿರಾಶ್ರಿತರ ಶಿಬಿರದಲ್ಲಿ ಕೊಡವರು ಸೇರಿದಂತೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಕುಟುಂಬದವರು ಇದ್ದಾರೆ.
Related Articles
ಪ್ರಕೃತಿ ವಿಕೋಪಕ್ಕೆ ಕೊಡಗು ತುತ್ತಾಗಿರುವುದರಿಂದ ಈ ವರ್ಷ ಬಕ್ರಿದ್ ಹಬ್ಬ ಸರಳವಾಗಿ ಪ್ರಾರ್ಥನೆ ಮೂಲಕ ಆಚರಿಸಲು ಮದ್ರಸಾ ಸಮಿತಿ ತೀರ್ಮಾನ ಮಾಡಿತ್ತು. ನಮ್ಮ ಮನೆಗೆ ಬಂಧುಗಳನ್ನು ಕರೆಯಲಿಲ್ಲ. ನೆರೆ ಸಂತ್ರಸ್ತರೇ ನಮ್ಮ ಬಂಧುಗಳಾಗಿದ್ದರು. ಯಾರ ಮನೆಯಲ್ಲೂ ಸಂಭ್ರಮ ಇರಲಿಲ್ಲ. ಬಹುತೇಕ ಯುವಕರು ಇಲ್ಲೇ ಆಚರಣೆ ಮಾಡಿದ್ದಾರೆ. ಸಂಸಾರ ಬಿಟ್ಟು ಸಂತ್ರಸ್ತರೊಂದಿಗೆ ಹಬ್ಬ ಆಚರಿಸಿಕೊಂಡ ಖುಷಿ ಇದೆ. ನಮಗೆ ಯಾವುದೇ ಬೇಸರ ಇಲ್ಲ. ಕಳೆದೆಲ್ಲ ವರ್ಷಗಳಿಗಿಂತ ಈ ವರ್ಷದ ಹಬ್ಬದಾಚರಣೆ ಸದಾ ನಮ್ಮಲ್ಲಿ ಉಳಿದುಕೊಳ್ಳುತ್ತದೆ ಎಂದು ಶಿಬಿರದ ಉಸ್ತುವಾರಿ ಸಿ.ಎಂ. ಹಮೀದ್ ಮೌಲ್ವಿ ಹೇಳಿದರು.
Advertisement
ಶಿಬಿರದಲ್ಲಿ ನಮ್ಮನ್ನು ಕುಟುಂಬದ ಸದಸ್ಯರಿಗಿಂತ ಚೆನ್ನಾಗಿ ನೋಡಿಕೊಳುತ್ತಿದ್ದಾರೆ. ಬಕ್ರಿದ್ ಹಬ್ಬದಲ್ಲಿ ನಾವೂ ಭಾಗಿಯಾಗಿದ್ದೇವೆ ಎಂಬ ನೆಮ್ಮದಿ ಇದೆ. ನಮ್ಮ ನೋವಿಗೆ ಸ್ಪಂದಿಸಿ ಯಾವುದೇ ಸಂಭ್ರಮವಿಲ್ಲದೇ ಸರಳವಾಗಿ ಹಬ್ಬ ಆಚರಿಸಿಕೊಂಡಿರುವು ನಿಜಕ್ಕೂ ಅನುಕರಣೀಯ. ಅವರೆಲ್ಲರೂ ನಮ್ಮೊಂದಿಗೆ ಊಟ ಮಾಡಿದ್ದಾರೆ ಎಂದು ರವಿ ಹಾಲೇರಿ ಸಂತೋಷಪಟ್ಟರು.
ಚಿತ್ರ: ಎಚ್.ಫಕ್ರುದ್ದೀನ್– ರಾಜು ಖಾರ್ವಿ ಕೊಡೇರಿ