Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಎರಡೂ ಯೋಜನೆಗಳ ಕುರಿತು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚಿಸಿ ಕೊಡಗು ಜಿಲ್ಲೆಗೆ ಆಗಬಹುದಾದ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಮಾರ್ಗ ನಿರ್ಮಾಣಕ್ಕಾಗಿ ವಿನಿಯೋಗಿಸಲು ಮೀಸಲಿಟ್ಟಿರುವ ಸುಮಾರು 1,818 ಕೋಟಿ ರೂ.ಗಳನ್ನು ರೈತರ, ಬೆಳೆಗಾರರ ಅಭ್ಯುದಯಕ್ಕಾಗಿ. ಕಾಡಾನೆಗಳ ಉಪಟಳವನ್ನು ತಡೆಯುವುದಕ್ಕಾಗಿ ಸೇರಿದಂತೆ ಕೊಡಗಿನ ಅಭಿವೃದ್ಧಿಗಾಗಿ ಖರ್ಚು ಮಾಡಲಿ. ಜನರು ಪಾವತಿಸಿದ ತೆರಿಗೆ ಹಣವನ್ನು ಕೊಡಗನ್ನು ಹಾಳು ಮಾಡಲು ಉಪಯೋಗಿಸುವುದು ಬೇಡವೆಂದು ಕ.ಮುತ್ತಣ್ಣ ಹೇಳಿದರು.
Related Articles
ಆರ್‌ಟಿಐ ಮೂಲಕ ಪಡೆದುಕೊಂಡ ದಾಖಲೆಗಳ ಪ್ರಕಾರ ಕೊಡಗಿನ ಮೂಲಕ ಮೂರು ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಲಿವೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇರಳ ಮುಖ್ಯಮಂತ್ರಿಗಳಿಗೆ ಮೈಸೂರು, ಬೆಂಗಳೂರು ರಾಷ್ಟೀಯ ಹೆದ್ದಾರಿಯಿಂದ ಕೇರಳದ ವಿಮಾನ ನಿಲ್ದಾಣವಿರುವ ಮಟ್ಟನ್ನೂರಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಗೆ ಮಂಜೂರಾತಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಉದ್ದೇಶಿತ ಹೆದ್ದಾರಿ ನಿರ್ಮಾಣಕ್ಕಾಗಿ 1,818 ಕೋಟಿ ರೂ. ಖರ್ಚು ಮಾಡುವ ಹಣವನ್ನು ಕೊಡಗಿಗೆ ಅವಶ್ಯವಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗಾಗಿ ಬಳಸಲು ಸಂಸದ ಪ್ರತಾಪ್ ಸಿಂಹರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಕ.ಮುತ್ತಣ್ಣ ತಿಳಿಸಿದರು.
Advertisement
ಬೇಕಾಗಿರುವ ಯೋಜನೆಗಳು ಕೊಡಗಿನಲ್ಲಿ ಪುಷ್ಪಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿರುವ ಸಣ್ಣ ಬೆಳೆಗಾರರು ಹಾಗೂ ಬೆಳೆಗಾರರಿಗೆ ಸಹಾಯಧನ ನೀಡುವುದು ಸೂಕ್ತ. ಇದರಿಂದಾಗಿ ಕಾಫಿ ಬೆಳೆಗಾರರು ತಮ್ಮ ಬೆಳೆಯಲ್ಲಿ ನಷ್ಟ ಬರುವ ಸಂದರ್ಭ ಪುಷ್ಪ ಕೃಷಿ ಹಾಗೂ ತೋಟಗಾರಿಕೆಯನ್ನು ಬದಲಿ ಕೃಷಿಯನ್ನಾಗಿ ಕೈಗೊಳ್ಳಬಹುದಾಗಿದೆ. ಅಂಥೋರಿಯಂ ಹಾಗೂ ಬಟರ್‌ಫೂ›ಟ್ ನಂತಹ ಕೃಷಿಯನ್ನು ಕೈಗೊಂಡು ತಮ್ಮ ಆದಾಯವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಭತ್ತ ಬೆಳೆಯುವ ರೈತರಿಗಾಗಿ ಉತ್ತಮವಾದ ಆರ್ಥಿಕ ಪ್ಯಾಕೇಜ್‌ನ್ನು ನೀಡಬಹುದು. ಈ ಬಗ್ಗೆ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು (ಯುನೈಟೇಡ್ ಕೊಡವ ಆರ್ಗನೈಝೇಸನ್) ಈಗಾಗಲೇ ಪ್ರಯತ್ನಿಸುತ್ತಿದ್ದಾರೆ. ರೈತರ ಭತ್ತದ ಕೃಷಿಗೆ ಶೇ.90 ಸಹಾಯಧನ ನೀಡಿ ಸೌರಬೇಲಿಯನ್ನು ನಿರ್ಮಿಸುವ ಮೂಲಕ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಬೇಕಾಗಿದೆ.ಇದೀಗ ಕೊಡಗಿನಲ್ಲಿ ಅರಣ್ಯ ಇಲಾಖೆ ಶೇ. 40 ರಷ್ಟು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಹೊಸ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಆನೆ ದಾಳಿಗಳನ್ನು ನಿಯಂತ್ರಿಸಲು ಕೊಡಗು ವನ್ಯ ಜೀವಿ ಸಂಘ ಕೆಲವು ಕಾರ್ಯಕ್ರಮಗಳನ್ನು ಹೊಂದಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠನಾಗೊಳಿಸಲು ಆರ್ಥಿಕ ಸಹಾಯದ ಆವಶ್ಯಕತೆ ಇದೆ ಎಂದರು. ಪರಿಸರ ಪಡೆಯನ್ನು ಸ್ಥಾಪಿಸುವ ಅಗತ್ಯವಿದ್ದು, ಇದಕ್ಕಾಗಿ ಕೇವಲ ರೂ. 45 ಕೋಟಿ ಸಾಕಾಗುತ್ತದೆ. ಇದು ಹೆಚ್ಚಾಗಿ ನಿವೃತ್ತ ಸೈನ್ಯ ಅಧಿಕಾರಿಗಳಿಂದ ಕೂಡಿರುತ್ತದೆ. ಅರಣ್ಯದೊಳಗೆ ಕಾಡಿನ ವಿಸ್ತಾರವನ್ನು ಹೆಚ್ಚಿಸುವುದು ಹಾಗೂ ಅರಣ್ಯ ಬೆಂಕಿಯನ್ನು ತಡೆಗಟ್ಟುವುದು ಈ ವಿಭಾಗದ ಕಾರ್ಯವಾಗಿರುತ್ತದೆ. ಸರಕಾರದೊಡನೆ ಪ್ರಾದೇಶಿಕ ಪರಿಸರ ಪಡೆಯ ಬಗ್ಗೆ ವ್ಯವಹರಿಸಲಾಗುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಸಂಸದ ಪ್ರತಾಪ್‌ಸಿಂಹ ಅವರನ್ನು ಭೇಟಿ ಮಾಡುತ್ತೇವೆ ಎಂದು ಕ.ಮುತ್ತಣ್ಣ ತಿಳಿಸಿದರು. ಕೇಂದ್ರದ ಯೋಜನೆಗಳಿಗೆ ಖರ್ಚು ಮಾಡುವ ಹಣವನ್ನು ಕೊಡಗಿನ ಸರ್ವಾಂಗೀಣ ಅಭಿವೃದ್ಧಿ, ಆರ್ಥಿಕ ಸುಧಾರಣೆ, ನಿರುದ್ಯೋಗ ನಿವಾರಣೆ, ಮಾನವ ಆನೆ ಸಂಘರ್ಷ ತಡೆ ಹಾಗೂ ಬೆಳೆಗಾರರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲು ಬಳಸುವ ಬಗ್ಗೆ ಭರವಸೆ ಇದೆ ಎಂದರು. ಸಂಸದರಾದ ಪ್ರತಾಪ್ ಸಿಂಹ ಅವರು ಕೊಡಗಿಗೆ ಅನಿವಾರ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೊಡಗಿನ ಹಾಗೂ ಅವರದೇ ಕ್ಷೇತ್ರದ ಮೈಸೂರು ವಿಭಾಗದ ರೈತರಿಗೆ ನೀರು ಒದಗಿಸುವ ಮೂಲಕ ಅತ್ಯುತ್ತಮ ಸೇವೆಯನ್ನು ಸಲ್ಲಿಸಬಹುದಾಗಿದೆ ಎಂದು ಕ.ಮುತ್ತಣ್ಣ ಅಭಿಪ್ರಾಯಪಟ್ಟರು. ಸೂಕ್ಷ್ಮ ಪರಿಸರ ವಲಯ
ಅತೀ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿತವಾಗಿರುವ ಗ್ರಾಮಗಳ ಜನಜೀವನಕ್ಕಾಗಲೀ, ವ್ಯವಸಾಯಕ್ಕಾಗಲೀ, ಬೆಳೆಗಾರರಿಗಾಗಲೀ ಯಾವುದೇ ರೀತಿಯ ತೊಂದರೆ ಇಲ್ಲವೆಂದು ಇತ್ತೀಚೆಗೆ ಪ್ರತಾಪ್ ಸಿಂಹ ಅವರು ಹೇಳಿದ್ದು, ಈ ಬಗ್ಗೆ ಸೂಕ್ತ ವಿವರಣೆಯನ್ನು ಕೊಡಗಿನ ಜನತೆಗೆ ನೀಡಬೇಕೆಂದು ಅವರು ಮನವಿ ಮಾಡಿದರು. ಕೂಟಿಯಾಲ ಸೇತುವೆ
ಕೊಡಗಿನ ಬಿರುನಾಣಿ ಪ್ರದೇಶದ ಬಹುವರ್ಷಗಳ ಬೇಡಿಕೆಯಾದ ಕೂಟಿಯಾಲ ಸೇತುವೆ ಇನ್ನೂ ಸಂದಿಗ್ಧ ಸ್ಥಿತಿಯಲ್ಲೇ ಇದೆ. 2000 ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಸೇತುವೆಯ ಇನ್ನೊಂದು ಪ್ರದೇಶ ಬ್ರಹ್ಮಗಿರಿ ವನ್ಯ ಜೀವಿ ಸಂರಕ್ಷಣಾ ಪ್ರದೇಶವಾಗಿದೆ. ಕೆಲವೇ ಮೀಟರುಗಳ ದೂರದ ಪ್ರದೇಶದ ಸಮಸ್ಯೆಯಿಂದಾಗಿ ಸೇತುವೆ ಪ್ರಯೋಜನಕ್ಕೆ ಬಂದಿಲ್ಲ. ರಾಷ್ಟ್ರೀಯ ಅರಣ್ಯ ಮಂಡಳಿಯ ಶಿಫಾರಸ್ಸಿನಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದರಿಂದ ಸಂಸದರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮೂಲಕ ಸೇತುವೆ ನಿರ್ಮಾಣಕ್ಕೆ ಅನುಮತಿ ಪಡೆಯಲಿ ಎಂದು ಕ.ಮುತ್ತಣ್ಣ ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ವೈಲ್ಡ್ ಲೈಫ್ ಸಂಸ್ಥೆಯ ಕಾರ್ಯದರ್ಶಿ ಕಾರ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ, ಪ್ರಮುಖರಾದ ರಾಯ್ ಬೋಪಣ್ಣ, ಡಾರ್ಲಿ ಬೆಳ್ಯಪ್ಪ ಹಾಗೂ ನವೀನ್ ಬೆಳ್ಯಪ್ಪ ಉಪಸ್ಥಿತರಿದ್ದರು. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಹುಲ್ಲು ಸೇರಿದಂತೆ ಆಹಾರ ಯೋಗ್ಯ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು 150 ಹೆಕ್ಟೇರ್ ಪ್ರದೇಶವನ್ನು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಗುರುತಿಸಿಕೊಂಡಿದ್ದು, ಇದನ್ನು ಮಾದರಿಯಾಗಿಟ್ಟುಕೊಂಡು ಸರಕಾರ ದೊಡ್ಡಮಟ್ಟದಲ್ಲಿ ಯೋಜನೆಯನ್ನು ರೂಪಿಸಲಿ ಎಂದರು. ಹೈಟೆನ್ಶನ್ ವಿದ್ಯುತ್ ಮಾರ್ಗದ ವಿರುದ್ಧ ನಡೆದ ಹೋರಾಟ ವಿಫಲ ಗೊಂಡ ಬಗ್ಗೆ ಸಮರ್ಥಿಸಿಕೊಂಡ ಕರ್ನಲ್ ಮುತ್ತಣ್ಣ, ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳುವುದನ್ನು ತಡೆಯುವಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ವಿದೇಶಿ ಹಣಕ್ಕೆ
ಆಡಿಟ್ ವರದಿ ಇದೆ
ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಗೆ ಯಾವುದೇ ವಿದೇಶಿ ಹಣ ಬರುತ್ತಿಲ್ಲವೆಂದು ಸ್ಪಷ್ಟಪಡಿಸಿರುವ ಕರ್ನಲ್ ಮುತ್ತಣ್ಣ, ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್‌ಗೆ ಮಾತ್ರ ವಿದೇಶಿ ಅನುದಾನ ಲಭ್ಯವಾಗುತ್ತಿದೆಯೆಂದು ಸ್ಪಷ್ಟಪಡಿಸಿದರು.
ವಿದೇಶಿ ಹಣ ದೊರೆಯಬೇಕಾದರೆ ಸ್ಥಳೀಯ ಪೊಲೀಸ್ ಇಲಾಖೆೆ ಮತ್ತು ರಾಜ್ಯ ಗೃಹ ಇಲಾಖೆಯಿಂದ ಅನುಮತಿಯ ಅಗತ್ಯವಿದೆ. ಅಷ್ಟು ಸುಲಭವಾಗಿ ವಿದೇಶಿ ಹಣ ಬರುವುದಿಲ್ಲವೆಂದು ತಿಳಿಸಿದ ಕರ್ನಲ್ ಮುತ್ತಣ್ಣ, ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್‌ನಲ್ಲಿ ಕಾಫಿ ಮಂಡಳಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸದಸ್ಯತ್ವವನ್ನು ಪಡೆದುಕೊಂಡಿವೆ. ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಇದು ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಿ ಹಣವನ್ನು ಪಡೆಯಲು ಅನುಮತಿ ಇದೆ. ವೈಲ್ಡ್ ಲೈಫ್ ಸೊಸೈಟಿ ಕೂಡ ಇದರಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದೆ. ಇಲ್ಲಿಗೆ ಬರುತ್ತಿರುವ ವಿದೇಶಿ ಹಣದ ಸಂಪೂರ್ಣ ಲೆಕ್ಕಾಚಾರ ಆಡಿಟ್ ವರದಿ ಟ್ರಸ್ಟ್ ಬಳಿ ಇದೆಯೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು.