ಮಡಿಕೇರಿ:ಯಾವುದೇ ಭಾಷೆಯಾಗಿದ್ದರೂ ಸಾಹಿತ್ಯದೊಂದಿಗೆ ಮನಸ್ಸುಗಳನ್ನೂ ಬೆಸೆಯಬೇಕಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಹೇಳಿದ್ದಾರೆ.
ನಗರದ ಕಾವೇರಿ ಸಭಾಂಗಣದಲ್ಲಿನ ಜ. ಹಬೀಬ್ ಲಾಯರ್ ವೇದಿಕೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಬ್ಯಾರೀಸ್ ವೆಲ್ಫೆರ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿತ ಜಿಲ್ಲಾ ಬ್ಯಾರಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಭಾಷೆ ಮೂಲಕ ಸಾಮರಸ್ಯ ಸಾಧಿಸಬೇಕಾದದ್ದು ಮುಖ್ಯ. ಎಲ್ಲ ಭಾಷೆಗಳು ಪರಸ್ಪರ ಬೆಸೆಯುತ್ತಾ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಬೇಕಾಗಿದೆ. ಅಭಿವ್ಯಕ್ತಿ ಮಾಧ್ಯಮ ಮಾತ್ರವಾಗಿರುವ ಒಂದು ಭಾಷೆ ಇತರ ಭಾಷೆಗಳೊಂದಿಗೆ ಬೆರೆತಾಗ ಮಾತ್ರ ಇನ್ನಷ್ಟು ಬೆಳೆಯುತ್ತದೆ ಎಂದು ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಅಭಿಪ್ರಾಯಪಟ್ಟರು.
ಸಮಾವೇಶದ ಅಂಗವಾಗಿನ ಬಹು ಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತ ನಾಡಿದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಸಮಾಜದಲ್ಲಿನ ಅನೇಕ ಅಶಿಕ್ಷಿತ ಜನರು ಜಾನಪದವನ್ನೇ ತಮ್ಮ ಭಾಷಾ ಮಾಧ್ಯಮವಾಗಿ ಹೊಂದಿದ್ದಾರೆ. ಇಂಥ ಅದೆಷ್ಟೋ ಜಾನಪದ ಸಾಹಿತ್ಯಗಳು ನಾಡಿನ ಸಾಂಸ್ಕೃತಿಕ ಸಂಪತ್ತಾಗಿದೆ ಎಂದು ಹೇಳಿದರು.
ಸಾಹಿತಿ ಬಿ.ಎ.ಸಂಶುದ್ದೀನ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್, ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್, ಅಕಾಡೆಮಿ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ ವೇದಿಕೆಯಲ್ಲಿದ್ದರು. ಮುನೀರ್ ಅಹಮ್ಮದ್ ಸ್ವಾಗತಿಸಿದರು. ಪುರಾತನ ಕಾಲದ ವಸ್ತುಗಳು, ನೋಟು, ನಾಣ್ಯಗಳ ಪ್ರದರ್ಶನ, ಸಾಹಿತ್ಯ ಕೃತಿಗಳ ಮಾರಾಟವೂ ಸಮಾವೇಶದ ಆಕರ್ಷಣೆಯಾಗಿತ್ತು.
ಬಹುಭಾಷೆ ಕವಿಗೋಷ್ಠಿಕವಿಗೋಷ್ಠಿಯಲ್ಲಿ ನಾಗೇಶ್ ಕಾಲೂರ್,ನಾಸೀರ್ ಅಹ್ಮದ್ ಕಾಜೂರು ಸತೀಶ್ ಕಿಶೋರ್ ರೈ ಕತ್ತಲೆ ಕಾಡು,ಪುದಿನೆರವನ ರೇವತಿ ರಮೇಶ್,ಫ್ಯಾನಿ ಮುತ್ತಣ್ಣ, ಬಶೀರ್ ಅಹ್ಮದ್, ವಿಲ್ಫೆ†ಡ್ ಕ್ರಾಸ್ತಾ, ಚಾರ್ಲ್ಸ್ ಡಿ’ಸೋಜಾ, ಶೀಲಾ, ಬಿ.ಆರ್.ಜೋಯಪ್ಪ, ಮರಿಯಮ್ ಇಸ್ಮಾಯಿಲ್, ಯು.ಕೆ. ಆಯಿಶಾ, ಹುಸೈನ್ ಕಾಟಿಪಳ್ಳ, ಎಂ. ಅಬ್ದುಲ್ಲಾ, ಕೆ.ಜಿ. ರಮ್ಯಾ, ಮೂಡುಬಿದಿರೆ ಹಸನಬ್ಬ, ಬಶೀರ್ ಅಹಮ್ಮದ್ ಅವರು ಬ್ಯಾರಿ, ಕನ್ನಡ, ಕೊಡವ,ಅರೆಭಾಷೆ, ಕೊಂಕಣಿ, ತುಳು ಭಾಷೆಗಳಲ್ಲಿ ಕವನ ವಾಚಿಸಿ ಗಮನ ಸೆಳೆದರು. ಜಿಲ್ಲೆಯ ಬ್ಯಾರಿ ಸಮುದಾಯದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.