ಮಡಿಕೇರಿ: ಕಾವೇರಿ ನದಿ ಹುಟ್ಟುವ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಇಲ್ಲಿನ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಾರೆ. ಮೂರು ರಾಜ್ಯಗಳಿಗೆ ನೀರು ಒದಗಿಸುವ ಕಾವೇರಿ ನಾಡಾದ ಕೊಡಗು ಜಿಲ್ಲೆಯವರಿಗೆ ಪ್ರತ್ಯೇಕವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.3 ರಷ್ಟು ಮೀಸಲಾತಿ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷರಾದ ಭಾರದ್ವಾಜ್ ಕೆ.ಆನಂದ ತೀರ್ಥ ಅವರು ಮನವಿ ಮಾಡಿದ್ದಾರೆ.
ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣ ವೆಚ್ಚದಲ್ಲಿ ಶೇ.50ರಷ್ಟು ರಿಯಾಯಿತಿ ಇರಬೇಕು. ರಾಜ್ಯದಲ್ಲಿ 30 ಸಾವಿರ ಜನ ಪೊಲೀಸ್ ಹುದ್ದೆಗೆ ಆಯ್ಕೆಯಾದಲ್ಲಿ ಅದರಲ್ಲಿ ಕನಿಷ್ಠ 30 ಜನರಿಗೆ ಕೊಡಗಿನವರಿಗೆ ಉದ್ಯೋಗ ಸಿಗಬೇಕು ಎಂದು ಅವರು ಒತ್ತಾಯಿಸಿದರು.
ಇಲ್ಲಿನ ಜಲಮೂಲಗಳ ರಕ್ಷಣೆ ಆಗಬೇಕಿದೆ. ಇಡೀ ಜಿಲ್ಲೆಯನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಬೇಕಾದ ಸ್ಥಿತಿ ಬಂದಿದೆ. ನಲವತ್ತು ವರ್ಷಗಳ ಹಿಂದಿನ ಜಿಲ್ಲೆಗೂ ಇಂದಿನ ಜಿಲ್ಲೆಗೂ ಇರುವ ವ್ಯತ್ಯಾಸ ಮತ್ತು ಅದರಿಂದ ಆಗಿರುವ ಲಾಭ ನಷ್ಟಗಳ ಚರ್ಚೆಯಾಗಬೇಕಾಗಿದೆ. ಇದರ ಬಗ್ಗೆ ವಸ್ತುನಿಷ್ಠ ಪರಿಶೀಲನೆಯಾಗಬೇಕೇ ಹೊರತು, ವ್ಯಕ್ತಿ ನಿಷ್ಠ ಪರಿಶೀಲನೆಯ ಅಗತ್ಯ ಇಲ್ಲ. ಕುಡಿಯುವ ನೀರಿನ ಸಲುವಾಗಿ ಪರದಾಡದ ಯಾವ ಗ್ರಾಮ ಈಗ ಜಿಲ್ಲೆಯಲ್ಲಿದೆ? ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ತುಂಬಾ ಕಡಿಮೆ ಇದ್ದು ಇವುಗಳ ಒತ್ತುವರಿಯ ತೆರವು ಆಗಬೇಕಿದೆ ಎಂದು ಅವರು ಆಗ್ರಹಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಭದ್ರವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಇತ್ತ ಇಂಗ್ಲೀಷ್ ಅಲ್ಲದ, ಅತ್ತ ಕನ್ನಡವೂ ಅಲ್ಲದ ಒಂದು ಜನಾಂಗದ ಸೃಷ್ಠಿ ನಡೆಯುತ್ತದೆ. ಇಂತಹ ಜನಾಂಗದವರು ತಮ್ಮ ಸಂಸ್ಕೃತಿಯ ಬೇರುಗಳನ್ನು ಕಿತ್ತುಕೊಂಡಾಗ ಇನ್ನಷ್ಟು ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗುತ್ತದೆ. ಹೀಗಾಗಿ ತಮ್ಮ ತಮ್ಮ ಸಂಸ್ಕೃತಿಯ ಬೇರುಗಳಿಂದ ಮಕ್ಕಳನ್ನು ಹೊರಗೆ ತೆಗೆಯದ್ದೇ ಅವರಲ್ಲಿ ಈ ನಾಡಿನ ಸಂಸ್ಕೃತಿಯ ಬಗ್ಗೆ ಇನ್ನಷ್ಟು ಒಲವು ಬರುವಂತೆ ಅವರನ್ನು ಬೆಳೆಸಬೇಕಾದದ್ದು ಇಂದಿನ ಪಾಲಕರ ಕರ್ತವ್ಯವಾಗಿದೆ. ಎಂದರು. ಸಲಹೆ ಮಾಡಿದರು.
ರಾಜ್ಯ ಮಟ್ಟದಲ್ಲಿ ಒಬ್ಬ ಲೇಖಕನಾಗಿ ಜನ ನನ್ನನ್ನು ಗುರುತಿಸಿದ್ದು, ಎಂ.ಸಿ.ನಾಣಯ್ಯ ಅವರ ನೆನಪುಗಳು ಮಾಸುವ ಮುನ್ನ ಕೃತಿಯ ಮೂಲಕ ಅದಕ್ಕೆ ಅವಕಾಶ ಮಾಡಿಕೊಟ್ಟ ಅವರಿಗೆ ಋಣಿ ಎಂದು ಭಾರದ್ವಾಜ್ ಕೆ.ಆನಂದ ತೀರ್ಥ ಹರ್ಷ ವ್ಯಕ್ತಪಡಿಸಿದರು.
ಕಾವೇರಿ ಜೋಪಾನ
ಎಂಟು ಕೋಟಿ ಜನರಿಗೆ ನೀರು, ನೆರಳು, ಅನ್ನ ನೀಡುವ ಕಾವೇರಿಯನ್ನು ಇಲ್ಲಿನ ಜನ ದೇವತೆಯೆಂದು ನಂಬಿದ್ದಾರೆ. ಪೂಜಿಸುತ್ತಾರೆ. ಆಕೆಯನ್ನು ತಾಯಿ ಕಾವೇರಮ್ಮ ಎಂದು ಕರೆಯುತ್ತಾರೆ. ಈ ತಾಯಿಯನ್ನು ನಾವು ನಮ್ಮ ಏಕೈಕ ಪುಟ್ಟ ಮಗಳಂತೆ ಜೋಪಾನ ಮಾಡಬೇಕಾದ ದಿನಗಳು ಬಂದಿವೆ. ಕಾವೇರಿಯನ್ನು ನಾವು ಅಮ್ಮ ಎಂದು ಕರೆಯೋಣ ಆದರೆ ಆಕೆಯನ್ನು ನಮ್ಮ ಮುದ್ದಿನ ಮಗಳಂತೆ ಜೋಪಾನ ಮಾಡೋಣ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವ ಕಾರಣ ಅಲ್ಲಿನ ತೆರಿಗೆಯ ಹಣದಲ್ಲಿ ಶೇ.10ಷ್ಟು ಹಣವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಬೇಕು. ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯಪಟ್ಟರು.