ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಆ. 26ರಂದು ಹಮ್ಮಿಕೊಂಡಿರುವ “ಕೊಡಗು ಚಲೋ’ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಎಲ್ಲ ಶಾಸಕರೂ ಭಾಗವಹಿಸಲು ಸೂಚಿಸಲಾಗಿದೆ.
ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರು ಈ ಕುರಿತು ಶಾಸಕರಿಗೆ ಪತ್ರ ಕಳುಹಿಸಿದ್ದಾರೆ.
ಮಡಿಕೇರಿಯಲ್ಲಿರುವ ಎಫ್ಎಂಸಿ ಕಾಲೇಜು ಬಳಿ ಭಗವತಿ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ನಡೆಯಲಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಉಪ ನಾಯಕ ಗೋವಿಂದರಾಜು, ವಿಧಾನಸಭೆ ಉಪ ನಾಯಕ ಯು.ಟಿ. ಖಾದರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ, ಸಲೀಂ ಅಹಮದ್ ಸಹಿತ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಕೊಡಗು ಚಲೋ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಂದು ನಮ್ಮ ಹೋರಾಟ ರಾಜ್ಯ ಸರಕಾರದ ವಿರುದ್ಧ ಎಂದು ಹೇಳಿದರು.
ವಿಪಕ್ಷ ನಾಯಕರ ಕರ್ತವ್ಯಕ್ಕೆ ಅಡ್ಡಿ ಮಾಡಲು ಸರಕಾರ ಮುಂದಾಗಿದೆ. ಎಸ್ಪಿ ಕೇವಲ ನೆಪ ಮಾತ್ರ. ಕಪ್ಪು ಬಾವುಟ ಪ್ರತಿಭಟನೆ ಸರಕಾರದ ಪ್ರಾಯೋಜಕತ್ವದಿಂದ ಆಗಿದೆ. ಹೀಗಾಗಿ ಈ ಹೋರಾಟ ಸರಕಾರದ ವಿರುದ್ಧವೇ ಹೊರತು, ಅಧಿಕಾರಿ ವಿರುದ್ಧ ಅಲ್ಲ. ಬಿಜೆಪಿಯವರಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಎಲ್ಲ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಪರಿಸ್ಥಿತಿ ಏನಾದೀತು ಎಂದು ಶಿವಕುಮಾರ್ ಪ್ರಶ್ನಿಸಿದರು.