Advertisement

ಭೂಲೋಕದ ಸ್ವರ್ಗ ಕೊಡಚಾದ್ರಿ ಪರ್ವತ

09:48 AM Sep 05, 2019 | sudhir |

ಕುಂದಾಪುರ: ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ಸಂಹರಿಸಿದ ಸ್ಥಳ, ಆದಿ ಶಂಕರಾಚಾರ್ಯರು ಧ್ಯಾನಸ್ಥರಾದ ಬೆಟ್ಟ, ಭೂಲೋಕದ ಸ್ವರ್ಗ, ಮಲೆನಾಡಿನ ಹೊನ್ನ ಶಿಖರ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಅಪರೂಪದ ಪ್ರಾಣಿ – ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಸಹಜ ಸುಂದರವಾದ ಕೊಡಚಾದ್ರಿ ಪರ್ವತಕ್ಕೆ ಕೊಡಚಾದ್ರಿಯೇ ಸಾಟಿ. ಭೂಲೋಕದ ಅಪ್ಸರೆ ಕೊಡಚಾದ್ರಿಯ ಸೌಂದರ್ಯ ಮಳೆಗಾಲದಲ್ಲಿ ಮತ್ತಷ್ಟು ಇಮ್ಮಡಿಯಾಗಿದೆ. ಬೆಟ್ಟವಿಡೀ ಹಬ್ಬಿರುವ ಹಚ್ಚ – ಹಸುರಿನ ಮರ – ಗಿಡಗಳ ಮಧ್ಯೆ ಚಾರಣ ಮಾಡುವುದೇ ಮನಸ್ಸು -ಕಣ್ಣಿಗೆ ಹಬ್ಬ.

Advertisement

ಪಶ್ಚಿಮಘಟ್ಟಗಳ ಸಾಲಿನಲ್ಲಿರುವ “ಕೊಡಚಾದ್ರಿ’ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1,343 ಮೀ. ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಪರ್ವತವು ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣ, ಹಸುರು – ಹಸುರಾದ ಪ್ರಕೃತಿ, ಬೆಟ್ಟ, ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಸಣ್ಣ – ಸಣ್ಣ ಜಲಪಾತಗಳಿಂದ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಂಡಂತೆ ಭಾಸವಾಗುತ್ತಿದೆ.

ಎಲ್ಲವನ್ನೂ ಮರೆಸುವ ಚಾರಣ
ಕೆಲಸದ ಒತ್ತಡ, ಮನಸ್ಸಿನ ಜಂಜಾಟ, ದೇಹಯಾಸ ಎಲ್ಲವನ್ನೂ ಮರೆಸುವ ಪ್ರಕೃತಿ ಸೌಂದರ್ಯ ಇಲ್ಲಿದೆ. ಚಾರಣಕ್ಕಿದು ಉತ್ತಮವಾದ ಸ್ಥಳ. ಇದು ಕ್ಲಿಷ್ಟಕರ ಬೆಟ್ಟವಾಗಿದ್ದರೂ, ಇಲ್ಲಿನ ಹಚ್ಚ – ಹಸುರಿನ ಮರ – ಗಿಡಗಳು, ಗಿರಿ- ಶಿಖರಗಳು ಈಗಂತೂ ತುಂಬಾನೇ ಚೆಂದವಾಗಿ ಕಾಣುತ್ತವೆ. ಸ್ನೇಹಿತರು ಅದರಲ್ಲೂ ಒಂದೇ ಮನಸ್ಥಿತಿಯವರು ಚಾರಣ ಮಾಡಿದರೆ, ತುಂಬಾ ಆನಂದಿಸಬಹುದು. ಎಲ್ಲ ಸೊತ್ತು, ಆಹಾರವನ್ನು ಅಗತ್ಯವಾಗಿ ತೆಗೆದುಕೊಂಡು ಹೋಗಿ.
– ಶಿವಾನಂದ ಸೂರ್ಗೋಳಿ, ಚಾರಣಿಗರು

Advertisement

ವಿಶೇಷವೇನು?
ಪಶ್ಚಿಮ ಘಟ್ಟದ ಸೌಂದರ್ಯದ ಜತೆಗೆ ಶಂಕರಾಚಾರ್ಯರು ಧ್ಯಾನಕ್ಕೆ ಕುಳಿತ ಸ್ಥಳದಲ್ಲಿ ಶಿಲೆಯಿಂದಲೇ ನಿರ್ಮಿಸಲಾದ ಕಲ್ಲಿನ ಮಂಟಪ “ಸರ್ವಜ್ಞ ಪೀಠ’ ವಿದೆ. ಪಕ್ಕದಲ್ಲೇ ನಿಸರ್ಗದತ್ತ “ಗಣೇಶನ ಗುಹಾಲಯ’ವಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ಕಣ್ಣಿಗೆ ರಸದೌತಣ. ಬೆಟ್ಟದ ಮೇಲಿನಿಂದ ಸುಮಾರು 5 ಕಿ.ಮೀ. ಕೆಳಗೆ ನಡೆದುಕೊಂಡು ಬಂದರೆ “ಹಿಡ್ಲುಮನೆ’ ಜಲಪಾತವಿದೆ. ಇಲ್ಲಿ ಮೂಕಾಂಬಿಕಾ ದೇವಿಯ ಮಂದಿರವೊಂದಿದೆ. ಪಕ್ಕದಲ್ಲೇ ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ.

ಹೋಗುವುದು ಹೇಗೆ?
ಕೊಲ್ಲೂರಿನಿಂದ ಜೀಪ್‌ಗ್ಳು ಬಾಡಿಗೆ ಮಾಡುತ್ತಿದ್ದು, ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದವರೆಗೆ ಹೋಗುತ್ತವೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ರಸ್ತೆಯ ಮೂಲಕ ಸಂಚರಿಸಬೇಕು. ಕಾರು, ಬೈಕ್‌ ಇತ್ಯಾದಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಚಾರಣ ಮಾಡುವುದಾದರೆ ಹೋಗಿ ಬರಲು ಸುಮಾರು 18 ಕಿ.ಮೀ. ಅಂತರವಿದೆ. ಚಾರಣಿಗರು ಅಲ್ಲೇ ಉಳಿದುಕೊಳ್ಳುವುದಾದರೆ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರಗಳಲ್ಲಿ ಮುಂಗಡ ಅನುಮತಿ ಪಡೆಯಬೇಕು. ಜೀಪ್‌ಗ್ಳು ರಾತ್ರಿ ಹೊತ್ತು ಅಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿಯಿಲ್ಲ. ಆದರೆ ಜೀಪ್‌ನಲ್ಲಿ ಹೋದವರು ಅಲ್ಲಿ ಉಳಿದುಕೊಂಡು, ಮರು ದಿನ ಬರಬಹುದು. ಹೋಗಿ ಬರುವುದಾದರೆ ಬೆಳಗ್ಗೆ 6 ರಿಂದ ಸಂಜೆ 6.30ರವರೆಗೆ ಮಾತ್ರ ಅನುಮತಿಯಿದೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಊಟದ ವ್ಯವಸ್ಥೆಯೂ ಇದೆ.

ಬರಹ: ಪ್ರಶಾಂತ್‌ ಪಾದೆ
ಚಿತ್ರ: ವಿ.ಬಿ. ಬೆಳ್ವೆ

Advertisement

Udayavani is now on Telegram. Click here to join our channel and stay updated with the latest news.

Next