Advertisement

ಚಾರ್ಮಾಡಿಯಿಂದ ಕೊಡಚಾದ್ರಿ: ಕಾಡಿನಲ್ಲಿ 300 ನೀರಿನ ತೊಟ್ಟಿ

02:19 AM Jul 09, 2019 | sudhir |

ಕುಂದಾಪುರ: ಪಶ್ಚಿಮಘಟ್ಟದಲ್ಲಿ ನೀರಿನ ಹರಿವಿನ ಕೊರತೆಯಾಗಿದೆ. ಈ ಬಾರಿ ಮಳೆಯಾಗಿಲ್ಲ . ಈ ಬೇಸಗೆಯಲ್ಲಿ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಕುಡಿಯುವ ನೀರಿನ ಅಭಾವವಾಗಿತ್ತು. ನೀರನ್ನರಸುತ್ತಾ ಕಾಡು ಪ್ರಾಣಿಗಳು ಊರಿಗೆ ಲಗ್ಗೆ ಹಾಕುವುದು ಸಾಮಾನ್ಯವಾಗಿತ್ತು. ಇದಕ್ಕಾಗಿ ಪರಿಸರಾಸಕ್ತರು ಸ್ವಪ್ರೇರಿತರಾಗಿ ಕಾಡಿನಲ್ಲಿ 300 ನೀರಿನ ಕಾಂಕ್ರೀಟ್ ತೊಟ್ಟಿಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ.

Advertisement

ಎಲ್ಲೆಡೆ ಸಮಸ್ಯೆ

ಈ ಬಾರಿಯ ಬೇಸಗೆಯಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಕರಾವಳಿಯ ದ.ಕ. ಉಡುಪಿ, ಉತ್ತರಕನ್ನಡದಲ್ಲೂ ನೀರಿನ ಸಮಸ್ಯೆ ತೀವ್ರವಾಗಿತ್ತು. ಅತ್ತ ಶಿವಮೊಗ್ಗದಲ್ಲೂ ತೀರಾ ಭಿನ್ನ ಪರಿಸ್ಥಿತಿ ಇರಲಿಲ್ಲ. ಪಶ್ಚಿಮಘಟ್ಟದಲ್ಲಿ ಸಾಕಷ್ಟು ವಿಶಿಷ್ಟ ತಳಿಯ ಕಾಡುಪ್ರಾಣಿಗಳಿವೆ. ಅಪರೂಪದ ಜೀವಸಂಕುಲಗಳಿವೆ. ಇನ್ನೆಲ್ಲೂ ಕಾಣಸಿಗದ ಜೀವವೈವಿಧ್ಯಗಳಿವೆ. ವಿಶಾಲವಾದ ಕಾಡಿನಲ್ಲಿ ಅಲ್ಲಲ್ಲಿ ನೀರಿನ ಆಶ್ರಯ ಇರುವುದರಿಂದ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಸಮಸ್ಯೆ ಇರಲಿಲ್ಲ. ಆದರೆ ಕಾಡ್ಗಿಚ್ಚು ಹಾಗೂ ಅರಣ್ಯ ಲೂಟಿ ಯಿಂದ ಕಾಡಿನ ಮರಗಳ ಸಂಖ್ಯೆಯೂ ಕ್ಷೀಣಿಸಿದೆ.

ವಲಸೆ

ಸಾಮಾನ್ಯವಾಗಿ ಕಾಡುಪ್ರಾಣಿಗಳು ಕಾಡಿನಲ್ಲಿ ಕೆರೆಗಳು, ನೀರಿನ ಒರತೆ ಬತ್ತಿಹೋದಾಗ ನೀರಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ವನ್ಯಜೀವಿಗಳು ಕೂಗುತ್ತಾ ನೀರರಸುತ್ತಾ ಕಾಡಂಚಿನ ಭಾಗದಲ್ಲಿ ತಿರುಗಾಡುವ ದೃಶ್ಯ ಕಾಣಿಸುತ್ತಿತ್ತು.

Advertisement

ಕುಂದಾಪುರ ತಾಲೂಕಿನಲ್ಲಿ ವಾರಾಹಿ ಕಾಲುವೆ ಇರುವ ಕಾರಣ, ವಾರಾಹಿಯ ಸಮೃದ್ಧ ನೀರು ಕಾಡಿನ ಪ್ರಾಣಿಗಳಿಗೆ ನೀರಿನಾಶ್ರಯವಾಗಿದೆ. ಆದರೆ ಕಾಲುವೆಯಲ್ಲಿ ಕಾಡುಪ್ರಾಣಿಗಳಿಗೆ ನೀರು ಕುಡಿಯಲು ಅವಕಾಶ ಇಲ್ಲ. ಕಾಲುವೆ ಆಳಕ್ಕೆ ಇಳಿಯಲು ವ್ಯವಸ್ಥೆ ಇಲ್ಲ. ಪ್ರಾಣಿಗಳು ಬೀಳುವ ಅಪಾಯದ ಸಾಧ್ಯತೆಯೇ ಹೆಚ್ಚು.

ತೊಟ್ಟಿ ರಚನೆ

ಮುಂದಿನ ಬೇಸಗೆಯಲ್ಲಿ ಪ್ರಾಣಿಗಳಿಗೆ ನೀರಿಗೆ ಸಮಸ್ಯೆಯಾಗದಂತೆ ಖಾಸಗಿಯಾಗಿಯೇ ಒಂದಷ್ಟು ತೊಟ್ಟಿಗಳನ್ನು ನಿರ್ಮಿಸಿಕೊಡಬೇಕೆಂದು ಎನ್‌ಇಸಿಎಫ್ ಸಂಘಟನೆ ನಿಶ್ಚಯಿಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿದ್ದು ಶೀಘ್ರದಲ್ಲಿಯೇ ಅರಣ್ಯ ಇಲಾಖೆ ಜತೆ ಸಮಾಲೋಚನೆ ನಡೆಸಲಿದೆ.

ಮಾಹಿತಿ ಸಂಗ್ರಹ

ಚಾರ್ಮಾಡಿಯಿಂದ ಕೊಡಚಾದ್ರಿವರೆಗೆ ದ.ಕ. ಉಡುಪಿ ಜಿಲ್ಲೆಗಳಲ್ಲಿ ಹಾದುಹೋಗುವ ಪಶ್ಚಿಮ ಘಟ್ಟದಲ್ಲಿ ಎಲ್ಲೆಲ್ಲೆ ಪ್ರಾಣಿಗಳಿಗೆ ಕುಡಿಯುವ ನೀರಿನ ತೀವ್ರ ಬರ ಎದುರಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತದೆ. ನಂತರ ಜೀವವೈವಿಧ್ಯ ಎಲ್ಲಿ ಸಾಕಷ್ಟು ಸಂಖ್ಯೆಯಲ್ಲಿದೆ, ಎಲ್ಲಿ ಅಳವಿನಿಂಚಿನ ಪ್ರಾಣಿಗಳಿವೆ, ಯಾವ ಪ್ರಾಣಿಗಳಿಗೆ ನೀರು ಹುಡುಕುತ್ತಾ ವಲಸೆ ಹೋಗುವುದು ಕಷ್ಟ ಎಂಬ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎಲ್ಲಿ ನೀರಿನ ಒರತೆ ಬತ್ತುತ್ತದೆ ಎಂದು ಕೂಡಾ ಗಮನಿಸಲಾಗುತ್ತದೆ. ಇಷ್ಟಾದ ಬಳಿಕ ಅರಣ್ಯ ಇಲಾಖೆಯ ಸಂಬಂಧಪಟ್ಟ ವಿಭಾಗಗಳ ಅಧಿಕಾರಿಗಳನ್ನು ಕೂಡಿಕೊಂಡು ತೊಟ್ಟಿ ಹಾಕಲಾಗುತ್ತದೆ.

ತೊಟ್ಟಿ

ನೀರಿನ ತೊಟ್ಟಿಗಳನ್ನು ಇಡುವ ಕುರಿತು ಯೋಚಿಸ ಲಾಗಿದೆ. 6×6 ಅಳತೆಯ 1.5 ಅಡಿ ಎತ್ತರದ ಇಳಿಜಾರು ಮಾದರಿಯ ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. 300 ಮೀ.ಗೊಂದರಂತೆ ಸುಮಾರು 300 ತೊಟ್ಟಿ ಗಳನ್ನು ಹಾಕುವ ಯೋಚನೆಯಿದೆ. ಈ ತೊಟ್ಟಿಗೆ ಯಾವುದೇ ಸಣ್ಣ ಸಣ್ಣ ಪ್ರಾಣಿಗಳು ಬಿದ್ದರೂ ಅವು ರಕ್ಷಿಸಿಕೊಂಡು ಹೋಗುವ ಮಾದರಿಯಲ್ಲಿ ಇರಲಿವೆ. ಈ ತೊಟ್ಟಿಗಳಿಗೆ ಸ್ಥಳೀಯರು ಅಥವಾ ಅರಣ್ಯ ಇಲಾಖೆಯವರು ನೀರು ಹಾಕುವ ಜವಾಬ್ದಾರಿ ಕೂಡಾ ನೀಡಲಾಗುವುದು. ತೊಟ್ಟಿಗಳ ವೆಚ್ಚವನ್ನು ಪರಿಸರಾಸಕ್ತ ದಾನಿಗಳೇ ಭರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next