Advertisement

ಕೋಚಿಮುಲ್ ಅಧ್ಯಕ್ಷ ನಂಜೇಗೌಡ ಪುನರಾಯ್ಕೆ

01:20 PM May 26, 2019 | Team Udayavani |

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ ಎರಡನೇ ಬಾರಿಗೆ ಅವಿರೋಧ ಆಯ್ಕೆಯಾದರು.

Advertisement

ಸಚಿವ ಕೃಷ್ಣಬೈರೇಗೌಡರು ನಡೆಸಿದ ಸಂಧಾನ, ರಾಜ್ಯ ಮೈತ್ರಿ ಪಕ್ಷಗಳ ಹೈಕಮಾಂಡ್‌ ನಿರ್ದೇಶನದಂತೆ ಕೆ.ವೈ.ನಂಜೇಗೌಡ ಮಾತ್ರವೇ ನಾಮಪತ್ರ ಸಲ್ಲಿಸಿದ್ದು, ವಿರುದ್ಧ ಯಾರೂ ಕಣಕ್ಕಿಳಿಯದ ಕಾರಣ ಅವರ ಆಯ್ಕೆಯನ್ನು ಪ್ರಕಟಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ವೈ.ನಂಜೇಗೌಡ ನಾಮಪತ್ರ ಸಲ್ಲಿಸುತ್ತಿದ್ದಂತೆ ಜೆಡಿ ಎಸ್‌ನ ಹಾಲಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಅವರ ಹೆಸರನ್ನು ಸೂಚಿಸಿ, ಮಾಜಿ ಅಧ್ಯಕ್ಷ ಕಾಂತರಾಜ್‌ ಅನುಮೋದಿಸಿದರು. ಚುನಾವಣಾಧಿಕಾರಿಯಾಗಿದ್ದ ವಿಭಾಗಾಧಿಕಾರಿ ಸೋಮಶೇಖರ್‌ ನಂಜೇಗೌಡರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಮೆಗಾ ಡೇರಿ ಸಾಕಾರ: ನೂತನ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಮಾತನಾಡಿದ ನಂಜೇಗೌಡ, ಮೆಗಾ ಡೇರಿ ಎಂದು ಎಲ್ಲಾ ಒಕ್ಕೂಟಗಳು ಹೆಸರಿಟ್ಟು ಆರಂಭಿಸಿವೆ. ಆದರೆ, ನಾವು ಕೋಲಾರದ ಹಾಲು ಒಕ್ಕೂಟದ ಆವರಣದಲ್ಲೂ 160 ಕೋಟಿ ರೂ. ವೆಚ್ಚದಲ್ಲಿ ಗೋಲ್ಡನ್‌ ಡೇರಿ ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಹಕಾರದ ಭರವಸೆ ನೀಡಿದ್ದು, ಇದನ್ನು ಹಾಲು ಒಕ್ಕೂಟಕ್ಕೆ ಸೇರಿದ 4.5 ಎಕರೆ ಜಾಗ ಜಾಲಪ್ಪ ಆಸ್ಪತ್ರೆ ಸಮೀಪವಿದ್ದು, ಅಲ್ಲಿ ತರಬೇತಿ ಕೇಂದ್ರ ಹಾಗೂ ಎಂ.ವಿ.ಕೃಷ್ಣಪ್ಪ ಶತಮಾನೋತ್ಸವ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದ್ದು, ಶೀಘ್ರ ನಿರ್ಮಿಸುವುದಾಗಿ ನುಡಿದರು.

105 ಕೋಟಿ ರೂ.ನಲ್ಲಿ ಪಶು ಆಹಾರ ಘಟಕ: ಪಶುಆಹಾರದ ಬೆಲೆ ನಿಯಂತ್ರಣಕ್ಕೆ ತರಲು ಒಕ್ಕೂಟದಿಂದಲೇ ಶಿಢ್ಲಘಟ್ಟದಲ್ಲಿ 105 ಕೋಟಿ ರೂ. ವೆಚ್ಚದಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ ಟೆಂಡರ್‌ ಕರೆಯಲಾಗಿದ್ದು, ಜ.15ರಂದು ಟೆಂಡರ್‌ ತೆರೆಯಲಿದ್ದು, ವರ್ಷದಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿ ತಮ್ಮ ಅವಧಿಯಲ್ಲಿ ಇದು ಕಾರ್ಯಗತಗೊಳಿಸುವುದಾಗಿ ನುಡಿದರು.

ಮಕ್ಕಳಿಗೆ ಹಾಸ್ಟೆಲ್: ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದೆ, ಹೆಬ್ಟಾಳ ಸಮೀಪದ ಡಿಯೋ ಮಾರ್ವೆಲ್ ಲೇಔಟ್‌ನಲ್ಲಿ 12 ಸಾವಿರ ಚದರಡಿ ಜಾಗವನ್ನು ಸರ್ಕಾರ ನೀಡಿದ್ದು, ಇದಕ್ಕಾಗಿ ಈಗಾಗಲೇ 80 ಲಕ್ಷ ರೂ. ಪಾವತಿಸಿರುವುದಾಗಿ ತಿಳಿಸಿದರು. ಈ ಹಾಸ್ಟೆಲ್ ಆರಂಭಗೊಂಡರೆ ಎರಡೂ ಜಿಲ್ಲೆಗಳ 250 ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದೆ. ಅದೇ ರೀತಿ ಶ್ರೀನಿವಾಸಪುರದಲ್ಲಿ ಕಾಟನ್‌ ಬಾಕ್ಸ್‌ಗಳ ತಯಾರಿಕಾ ಘಟಕ ಸ್ಥಾಪನೆಗೂ ತಾವು ಪ್ರಯತ್ನಿಸಿದ್ದು, ಈ ಎಲ್ಲಾ ಕನಸು ನನಸಾಗಲು ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ ನೀಡಿದರು.

Advertisement

ಸಚಿವ ಕೃಷ್ಣಬೈರೇಗೌಡ ಶುಭ ಹಾರೈಕೆ: ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಅವಿಭಜಿತ ಜಿಲ್ಲೆಯ ಎಲ್ಲಾ ಮುಖಂಡರು, ಹಾಲು ಒಕ್ಕೂಟದ ಎಲ್ಲಾ ನಿರ್ದೇಶಕರೊಂದಿಗೆ ಮಾತನಾಡಿ ಕೋಚಿಮುಲ್ಗೆ ಶಾಸಕ ಕೆ.ವೈ.ನಂಜೇಗೌಡರನ್ನು ಒಮ್ಮತದ ಆಯ್ಕೆ ಮಾಡಲಾಗಿದ್ದು, ಅವರಿಗೆ ಶುಭ ಕೋರಿದರು.

ಎರಡೂ ಜಿಲ್ಲೆಗಳ ಮುಖಂಡರು, ನಿರ್ದೇಶಕರು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್‌ಗುಂಡೂರಾವ್‌, ಪರಮೇಶ್ವರ್‌ರ ಸೇರಿದಂತೆ ಎಲ್ಲರ ಸೂಚನೆಯ ಮೇರೆಗೆ ಈ ಒಮ್ಮತದ ಆಯ್ಕೆ ನಡೆದಿದೆ. ನಂಜೇಗೌಡರು ಹಿಂದಿನ ಅವಧಿಯಲ್ಲಿ ಕೇವಲ 6-7 ತಿಂಗಳು ಮಾತ್ರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಈ ಅವಧಿಯಲ್ಲಿ ಮತ್ತೆ ಅವರಿಗೆ ಅವಕಾಶ ನೀಡಲು ಒಮ್ಮತದಿಂದ ತೀರ್ಮಾನಿಸಿದ್ದಾಗಿ ತಿಳಿಸಿದರು. ಲಕ್ಷಾಂತರ ಮಂದಿ ಹಾಲು ಉತ್ಪಾದಕರು, ರೈತರ ಜೀವಾಳ ಈ ಸಂಸ್ಥೆಯಾಗಿದೆ. ಇದನ್ನು ಸರಿಯಾಗಿ ಮುನ್ನಡೆಸುವ ಅಗತ್ಯವಿದೆ, ಹಾಲು ಮಾರುಕಟ್ಟೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಮೂಲಕ ಸಂಸ್ಥೆಯ ಆಡಳಿತದಲ್ಲೂ ಸುಧಾರಣೆ ಕಾಣಬೇಕು, ಸೋರಿಕೆ ತಡೆಗಟ್ಟಬೇಕು ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.

ಸಿಬಿಪುರದಿಂದ ಕೆಎಂಎಫ್‌ಗೆ ನಿರ್ದೇಶಕರು: ಸಂಪ್ರದಾಯದಂತೆ ಕೋಲಾರ ಜಿಲ್ಲೆಯವರು ಕೋಚಿಮುಲ್ಗೆ ಅಧ್ಯಕ್ಷರಾದರೆ, ಕೆಎಂಎಫ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯವರು ನಿರ್ದೇಶಕರಾಗಿ ಆಯ್ಕೆ ಮಾಡಬೇಕಾಗುತ್ತದೆ. ಈ ಸಂಪ್ರದಾಯ ಮುಂದುವರಿಯಲಿದೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

ಸಚಿವ ಶಿವಶಂಕರರೆಡ್ಡಿ, ನಿರ್ದೇಶಕರಾದ ಅಶ್ವತ್ಥ್ ರೆಡ್ಡಿ, ಸುನಂದಮ್ಮ, ಡಿ.ವಿ.ಹರೀಶ್‌, ಹನುಮೇಶ್‌, ಅಶ್ವತ್ಥ್ನಾರಾಯಣ, ಮಂಜುನಾಥರೆಡ್ಡಿ, ವೆಂಕಟೇಶ್‌, ಜಯಸಿಂಹ, ಕಾಂತಮ್ಮ, ಸುನಂದಮ್ಮ, ಕೋಚಿಮುಲ್ ಕಾರ್ಯ ನಿರ್ವಾಹಕ ನಿರ್ದೇಶಕ ಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next