Advertisement

ಕೋಚಿಮುಲ್‌: ಮತದಾನಕೆ ಸಿದ್ಧತೆ

11:00 AM May 11, 2019 | Team Udayavani |

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ 9 ಸ್ಥಾನಗಳಿಗೆ ಮೇ 13 ರಂದು ನಡೆಯಲಿರುವ ಮತದಾನಕ್ಕಾಗಿ ನಗರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ಮತದಾನದ ಸಂಬಂಧ ಕಾಲೇಜು ಕಟ್ಟಡ, ಕೊಠಡಿಗಳನ್ನು ಪರಿಶೀಲಿಸಲು ಶುಕ್ರವಾರ ಗೋಕುಲ ಕಾಲೇಜಿಗೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಹಾಲು ಒಕ್ಕೂಟದ 13 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಣದಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ಉಳಿದು ಕೊಂಡಿದ್ದರಿಂದಾಗಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ಘೋಷಿಲಾಗಿದ್ದು, ಉಳಿದಂತೆ ಜಿಲ್ಲೆಯ 5 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

9 ಕ್ಷೇತ್ರಗಳ ಮತದಾನಕ್ಕಾಗಿ ಹಾರೋಹಳ್ಳಿ ಜಯನಗರದ ಗೋಕುಲ ವಿದ್ಯಾಸಂಸ್ಥೆಯಲ್ಲಿ 9 ಕೊಠಡಿಗಳನ್ನು ಆಯ್ಕೆ ಮಾಡಲಾಗಿದೆ ಎಂದ ಜಿಲ್ಲಾಧಿಕಾರಿಯವರು, ಒಟ್ಟು 1200 ಮತದಾರರು ಮತದಾನ ಮಾಡಲಿದ್ದಾರೆ. ಈಗಾಗಲೇ ಆಯಾ ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಮಂಡಳಿ ನಾಮನಿರ್ದೇಶನ ಮಾಡಿರುವ ಮತದಾರರಿಗೆ ಡೆಲಿಗೇಟ್‌ ಫಾರಂ ಹಾಗೂ ಗುರುತಿನ ಚೀಟಿ ನೀಡಲಾಗಿದೆ. ಅವರಿಗೆ ಮಾತ್ರ ಮತದಾನದಲ್ಲಿ ಪಾಲ್ಗೊ ಳ್ಳಲು ಅವಕಾಶವಿದೆ ಎಂದರು. ಮತದಾನ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೂ ನಡೆಯಲಿದ್ದು, ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆ 5.30ರ ವೇಳೆಗೆ ಫಲಿತಾಂಶ ಹೊರಬರಲಿದೆ ಎಂದು ತಿಳಿಸಿದರು.

ನಿಷೇಧಾಜ್ಞೆ ಜಾರಿ: ಮತದಾನ ಮತ್ತು ಮತ ಎಣಿಕೆ ಕಾರ್ಯ ನಡೆಯುವ ಮೇ 13ರಂದು ಗೋಕುಲ ಕಾಲೇಜು ಸುತ್ತಮುತ್ತ ಸೆಕ್ಷನ್‌ 144ರಡಿ ನಿಷೇಧಾಜ್ಞೆ
ಜಾರಿ ಮಾಡಲಾಗುವುದು. ವಿಜಯೋತ್ಸವ, ಗುಂಪು ಸೇರುವುದು, ಗೊಂದಲಕ್ಕೆ ಅವಕಾಶ ನೀಡದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರೂ ಶಾಂತಿಯುತ ಚುನಾವಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಗೋಕುಲ ಕಾಲೇಜು ಪಕ್ಕದ ರಸ್ತೆ ಬಂದ್‌ ಆಗುವುದರಿಂದ ಆ ದಿನದ ಮಟ್ಟಿಗೆ ಬೇರೆ ಏರ್ಪಾಟು ಮಾಡಿಕೊಳ್ಳಲು ಕೋರಿದರು. ಚುನಾವಣಾಧಿಕಾರಿಯೂ ಆಗಿರುವ ವಿಭಾಗಾಧಿಕಾರಿ ಸೋಮಶೇಖರ್‌, ಚುನಾವಣೆ ಶಾಂತಿಯು ತವಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುವುದು, ಮತಗಟ್ಟೆ ಸುತ್ತ ತಡೆಗೋಡೆಯನ್ನು ನಿರ್ಮಿಸಲಾಗುವುದು, ಈ ಸಂಬಂಧ ಪೊಲೀಸ್‌ ಇಲಾಖೆ ಸಹಕಾರ ಪಡೆಯಲಾಗಿದೆ ಎಂದರು.

Advertisement

ಡಿಲಿಗೇಟ್‌ಫಾರಂಗೆ ಪರಿಶೀಲನಾಧಿಕಾರಿ: ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಮಾತನಾಡಿ, ಮತದಾನದ ಅರ್ಹತೆಗಾಗಿ ಎಂಪಿಸಿಎಸ್‌ಗಳಿಂದ ನಾಮನಿರ್ದೇಶಿತಗೊಂಡ ಮತದಾರರಿಗೆ ನೀಡುವ ಡೆಲಿಗೇಟ್‌ ಫಾರಂ ನೀಡಿಕೆಯಲ್ಲಿ ತಪ್ಪಾಗದಂತೆ ಪರಿಶೀಲನೆಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಪರಿಶೀಲನಾಧಿ ಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಸಮ್ಮತ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಯಾವುದೇ ಗೊಂದಲ, ಸಮಸ್ಯೆಗಳು ಎದುರಾಗದಂತೆ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೋಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ, ನಗರಠಾಣೆ ವೃತ್ತ ನಿರೀಕ್ಷಕ ನಾಗರಾಜ್‌, ಪಿಎಸ್‌ಐ ಶಂಕರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗ ರಾಜಗೌಡ, ಕೋಚಿಮುಲ್‌ ಉಪವ್ಯವಸ್ಥಾಪಕರಾದ ನಾಗೇಶ್‌, ಮಲ್ಲಿಕಾರ್ಜುನ್‌, ರಮೇಶ್‌ಬಾಬು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next