ಕೋಲಾರ: ಕೋಚಿಮುಲ್ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆ ಮೇ 13 ನಡೆಯುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ಓಲೈಕೆ ಮಾಡಲು ವಿವಿಧ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ಪ್ರತಿ ದಿನ ಕೋಟಿಗಟ್ಟಲೆ ವಹಿವಾಟು ನಡೆಯುವ ಒಕ್ಕೂಟದಲ್ಲಿ ನಿರ್ದೇಶಕರಾಗಲು ಜಿಪಂ, ತಾಪಂ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಿಂದ ವಂಚನೆಗೆ ಒಳಗಾದವರು ಕೋಚಿಮುಲ್ಗೆ ಪ್ರವೇಶ ಮಾಡಲು ಮುಂದಾಗುತ್ತಾರೆ. ಒಕ್ಕೂಟದ 13 ಸ್ಥಾನಗಳಲ್ಲಿ 4 ಸ್ಥಾನ ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ಮಂದಿ ನಿರ್ದೇಶಕರ ಚುನಾವಣೆಗೆ ಮೇ 13ಕ್ಕೆ ಚುನಾವಣೆ ನಿಗಯಾಗಿದೆ. ಸೀರೆ, ಮೊಬೈಲ್, ವಾಚ್, ಚಿನ್ನಾಭರಣ ಉಡುಗೋರೆ ಹಾಗೂ ಪ್ರವಾಸ ಕಳುಹಿಸುವ ಮೂಲಕ ಮತದಾರರನ್ನು ಓಲೈಕೆ ಮಾಡುವ ಕಸರತ್ತು ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ಮಾತ್ರ ಇರುತ್ತದೆ. ಒಕ್ಕೂಟವು ಎರಡೂ ಜಿಲ್ಲೆಯ 11 ತಾಲೂಕುಗಳಲ್ಲಿ 2063 ಸಾವಿರ ಹಾಲು ಉತ್ಪಾಧಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 2,78,886 ಲಕ್ಷ ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡು 10 ಲಕ್ಷ ಹಾಲು ಉತ್ಪಾದಿಸುತ್ತಿದ್ದಾರೆ. ಒಕ್ಕೂಟದ 13 ನಿರ್ದೇಶಕರ ಸ್ಥಾನದ ಪೈಕಿ 4 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, 9 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ಹಾಗೂ ಕೋಲಾರ ಜಿಲ್ಲೆಯಲ್ಲಿ 5 ಮಂದಿ ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆ: ಬಂಗಾರಪೇಟೆಯ ಜಯಸಿಂಹ, ಗೌರಿಬಿದನೂರಿನ ಕಾಂತರಾಜ್, ಗುಡಿಬಂಡೆ ಅಶ್ವತ್ಥ್ರೆಡ್ಡಿ ಹಾಗೂ ಚಿಕ್ಕಬಳ್ಳಾಪುರದ ಮಹಿಳಾ ಕ್ಷೇತ್ರದ ಅಭ್ಯರ್ಥಿ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 21 ಮಂದಿ ಕಣದಲ್ಲಿದ್ದು, ಆ ಪೈಕಿ ಶ್ರೀನಿವಾಸಪುರದಲ್ಲಿ ಹಾಲಿ ನಿರ್ದೇಶಕ ಬೈರಾರೆಡ್ಡಿ, ಕೋಚಿಮುಲ್ ನಿವೃತ್ತ ಅಧಿಕಾರಿ ಹನುಮೇಶ್, ಮಾಲೂರು ಕೋಚಿಮುಲ್ ಹಾಲಿ ಅಧ್ಯಕ್ಷ ಹಾಗೂ ಶಾಸಕ ಕೆ.ವ್ಯ.ನಂಜೇಗೌಡ, ಮಾಜಿ ಅಧ್ಯಕ್ಷ ಪ್ರಸನ್ನ, ಕೋಲಾರದಿಂದ ಹಾಲಿ ನಿರ್ದೇಶಕ ಆರ್.ರಾಮಕೃಷ್ಣೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್, ಮುಳಬಾಗಿಲಿನಿಂದ ಹಾಲಿ ನಿರ್ದೇಶಕ ರಾಜೇಂದ್ರಗೌಡ, ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಶಿಡ್ಲಘಟ್ಟದಿಂದ ಹಾಲಿ ನಿರ್ದೇಶಕ ಮುನಿಯಪ್ಪ, ಶ್ರೀನಿವಾಸ್ ಕಣದಲ್ಲಿ ಇದ್ದಾರೆ.ಚಿಕ್ಕಬಳ್ಳಾಪುರದಿಂದ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ವೆಂಕಟೇಶ್, ಚಿಂತಾಮಣಿಯಿಂದ ಹಾಲಿ ನಿರ್ದೇಶಕ ಅಶ್ವತ್ಥ್ನಾರಾಯಣ, ಮಾಜಿ ಅಧ್ಯಕ್ಷ ತಳಗವಾರ ರಾಜಗೋಪಾಲ್, ಬಾಗೇಪಲ್ಲಿಯಿಂದ ಚೌಡರೆಡ್ಡಿ, ಮಂಜುನಾಥರೆಡ್ಡಿ, ಮಹಿಳಾ ಕ್ಷೇತ್ರದಿಂದ ಕೋಲಾರದಲ್ಲಿ ಕಾಂತಮ್ಮ, ರತ್ನಮ್ಮ, ಪ್ರಭಾವತಿ, ಶಾಂತಮ್ಮ ಸ್ಪರ್ಧಿಸಿದ್ದಾರೆ. ಮತ ಓಲೈಕೆಗೆ ಬಂಪರ್ ಅಫರ್ ನೀಡುತ್ತಿದ್ದಾರೆ.
ಕೋಟಗಟ್ಟಲೆ ಹಣ ಖರ್ಚು: ಬಹುತೇಕ ಹಾಲಿ ಸದಸ್ಯರು ಪುನರಾಯ್ಕೆಯಾಗಲು ನಾನಾ ವಿಧದ ಕಸರತ್ತು ನಡೆಸುತ್ತಿದ್ದಾರೆ. ಇವರಿಗೆ ಪೈಪೋಟಿಯಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೊದಲ ಬಾರಿಗೆ ಕೋಚಿಮುಲ್ ನಿರ್ದೇಶಕರಾಗಲು ಇನ್ನಿಲ್ಲದಂತೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಪ್ರತಿ ಅಭ್ಯರ್ಥಿಯು ಕನಿಷ್ಠ ಎರಡರಿಂದ ಮೂರು ಕೋಟಿ ರೂ. ಮತದಾರ ಪ್ರತಿನಿಧಿಗಳಿಗಾಗಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಚುನಾವಣೆಯಲ್ಲಿ ನಿರ್ಮಾಣವಾಗಿದೆ.
ಮುಳಬಾಗಿಲಿನ ಪ್ರಭಾವತಿ ಶುಕ್ರವಾರ ಕೋಲಾರದಲ್ಲಿ ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಲು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಹಾಗೂ ನೀಲಕಂಠೇಗೌಡರ ಜತೆ ಕಾರಿನಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಭಾವ ಚಿತ್ರವಿರುವ ರೇಷ್ಮೆ ಸೀರೆಗಳನ್ನು ತುಂಬಿಸಿಕೊಂಡಿದ್ದು ಕಂಡು ಬಂದಿತು.