ಮಂಗಳೂರು: ಲಾಕ್‌ಡೌನ್ ಮಧ್ಯೆಯೂ ಕೊಚ್ಚಿ-ಮಂಗಳೂರು ಗೈಲ್ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಿರಾತಂಕವಾಗಿ ನಡೆಯುತ್ತಿದ್ದು, ಮೇ 15ರ ವೇಳೆಗೆ ದ.ಕ. ಜಿಲ್ಲೆಯ 35 ಕಿ.ಮೀ. ಕಾಮಗಾರಿ ಸಂಪೂರ್ಣವಾಗಲಿದೆ. ಕಾಸರಗೋಡಿನ ಚಂದ್ರಗಿರಿ ನದಿ ಸೇರಿದಂತೆ ಕೆಲವೆಡೆ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಜೂನ್ ಅಂತ್ಯದಲ್ಲಿ ಮಂಗಳೂರಿನ ಎಂಸಿಎಫ್‌ಗೆ ಗ್ಯಾಸ್ ದೊರೆಯುವ ನಿರೀಕ್ಷೆಯಿದೆ.
ರಾಜ್ಯದ ಏಕೈಕ ರಸ ಗೊಬ್ಬರ ಕಾರ್ಖಾನೆಯಾಗಿರುವ ಎಂಸಿಎಫ್ ನಲ್ಲಿ ರಸಗೊಬ್ಬರ ಉತ್ಪಾದನೆಗೆ ನೈಸರ್ಗಿಕ ಅನಿಲ ಬಳಸಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ ಗೈಲ್ ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರಿಗೆ 450 ಕಿ.ಮೀ. ಉದ್ದದ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಆರಂಭಿಸಿತ್ತು. ಮಂಗಳೂರು ತಾ|ನ ಮಳವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡೂxರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಪಜೀರು, ಮುಡಿಪು, ಇನೋಳಿ, ಅರ್ಕುಳ, ಮಳವೂರು, ಬೈಕಂಪಾಡಿ ಗ್ರಾಮಗಳಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದ್ದರೂ ಜಿಲ್ಲಾಡಳಿತದ ವಿಶೇಷ ಅನುಮತಿ ಮೇರೆಗೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಎಂಸಿಎಫ್ ಹಿಂಭಾಗದಲ್ಲಿ ಸದ್ಯ ಪೈಪ್ ಜೋಡಣೆ ಕಾಮಗಾರಿ ನಡೆಯುತ್ತಿದೆ. ಅತ್ತ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ 45 ದಿನಗಳ ಕಾಮಗಾರಿ ಬಾಕಿಯಿದೆ. ಎಂಸಿಎಫ್‌ಗೆ ಗ್ಯಾಸ್ ಪೂರೈಕೆ ಆರಂಭವಾದ ಬಳಿಕ ಮನೆಗಳಿಗೂ ಪೂರೈಸುವ ಯೋಜನೆ ಇದ್ದು, ಗೈಲ್ ಗ್ಯಾಸ್‌ನ ಪ್ರತಿನಿಧಿಗಳು ನಗರದ ಮನೆ ಮನೆಗೆ ಆಗಮಿಸಿ ನೋಂದಣಿ ಮಾಡುತ್ತಿದ್ದಾರೆ. 100 ಸಿಎನ್‌ಜಿ (ನೈಸರ್ಗಿಕ ಅನಿಲ…) ಸ್ಟೇಷನ್‌ಗಳೂ ಆರಂಭವಾಗಲಿವೆ.
ವಾರದೊಳಗೆ “ಹೈಡ್ರೋ ಟೆಸ್ಟ್’
ಗ್ಯಾಸ್ ಸಾಗಾಟದ ಪೂರ್ವ ಭಾವಿಯಾಗಿ ವಾರದೊಳಗೆ ಪೈಪ್‌ಲೈನ್‌ನಲ್ಲಿ ಹೈಡ್ರೋ ಟೆಸ್ಟ್ ನಡೆಸಲು ಕಂಪೆನಿ ಉದ್ದೇಶಿಸಿದೆ. ನಿಗದಿತ ಪ್ರಮಾಣದ ನೀರನ್ನು 24 ಗಂಟೆ ಕಾಲ ಹೈಸ್ಪೀಡ್‌ನಲ್ಲಿ ಪೈಪ್‌ಲೈನ್‌ನಲ್ಲಿ ಹಾಯಿಸಲಾಗುತ್ತದೆ. ಆ ಬಳಿಕ ಪೈಪ್ ಪರಿಶೀಲನೆ ಹಾಗೂ ಸುರಕ್ಷಾ ಪರಿಶೀಲನೆ ನಡೆಸಿ ಗ್ಯಾಸ್ ಪೂರೈಕೆ ಆರಂಭಿಸಲಾಗುತ್ತದೆ.
ಬಹುನಿರೀಕ್ಷಿತ ಕೊಚ್ಚಿ- ಮಂಗಳೂರು ಗ್ಯಾಸ್ ಪೈಪ್‌ಲೈನ್‌ನ 35 ಕಿ.ಮೀ. ಉದ್ದದ ಮಂಗಳೂರು ವಿಭಾಗ ಮೇ 15ರ ಸುಮಾರಿಗೆ ರೀ ಕಮಿಶನಿಂಗ್ ಹಂತಕ್ಕೆ ಬರಲಿದೆ. ಬಾಕಿ ಇದ್ದ ಕಾಮಗಾರಿಯನ್ನು ಲಾಕ್‌ಡೌನ್ ಮಧ್ಯೆ ಜಿಲ್ಲಾಡಳಿತದ ವಿಶೇಷ ಅನುಮತಿಯೊಂದಿಗೆ ಪೂರ್ಣಗೊಳಿಸಲಾಗಿದೆ. ಜೂನ್ ಅಂತ್ಯದ ವೇಳೆ ಗ್ಯಾಸ್ ಸರಬರಾಜು ಆರಂಭವಾಗುವ ನಿರೀಕ್ಷೆಯಿದೆ.
– ವಿಜಯಾನಂದ, ಡಿಜಿಎಂ, ಗೈಲ್ ಲಿ. ಮಂಗಳೂರು ವಿಭಾಗ