ಮಂಗಳೂರು: ಬಹು ನಿರೀಕ್ಷಿತ ಕೊಚ್ಚಿ-ಮಂಗಳೂರು (450 ಕಿ.ಮೀ.) ಮಧ್ಯೆ ಗೈಲ್ ಪೈಪ್‌ಲೈನ್‌ನಲ್ಲಿ ನೈಸರ್ಗಿಕ ಅನಿಲ ಸರಬರಾಜು ಮಾಡುವ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದಿದ್ದು, ಜ. 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ಉದ್ಘಾಟಿಸಲಿದ್ದಾರೆ. ಕರ್ನಾಟಕ, ಕೇರಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್‌ನಲ್ಲಿ ಸೀಮಿತ ಅತಿಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಎಂಸಿಎಫ್‌ನಂತೆಯೇ ಅದೇ ಭಾಗದಿಂದ ಎಂಆರ್‌ಪಿಎಲ್‌ಗೂ ನೈಸರ್ಗಿಕ ಅನಿಲ ಸರಬರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ವಾಹನಗಳ ಪೂರೈಕೆ (ಸಿಎನ್‌ಜಿ), ಗೃಹ ಬಳಕೆ (ಪಿಎನ್‌ಜಿ) ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆಗಳ ಬಳಕೆ ಎಂಬುದಾಗಿ ಬೇರ್ಪಡಿಸಿ ಗೇಲ್ ಸಂಸ್ಥೆಯು ಅನಿಲ ಪೂರೈಕೆ ಮಾಡಲಿದ್ದು, ಇದಕ್ಕಾಗಿ ಸದ್ಯ ನೋಂದಣಿ ನಡೆಯುತ್ತಿದೆ.
ತಿಂಗಳಿಗೆ 60 ಕೋ.ರೂ!
ನೈಸರ್ಗಿಕ ಅನಿಲವನ್ನು ಎಂಸಿಎಫ್ ಸಂಸ್ಥೆ ನ. 23ರಂದು ಸಾಂಕೇತಿಕವಾಗಿ ಪಡೆದುಕೊಂಡಿದೆ. ಡಿ. 15ರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಗ್ಯಾಸ್ ಮೂಲಕವೇ ಯೂರಿಯಾ ಉತ್ಪಾದಿಸುತ್ತಿದೆ. ನೈಸರ್ಗಿಕ ಅನಿಲವು ಅಧಿಕ ಇಂಧನ ದಕ್ಷತೆ ಹೊಂದಿದೆ ಹಾಗೂ ಪರಿಸರ ಸ್ನೇಹಿಯಾಗಿದೆ. ಸದ್ಯ ಪ್ರತೀ ದಿನ 8 ಲಕ್ಷ ಕ್ಯು.ಮೀ. ನೈಸರ್ಗಿಕ ಅನಿಲವನ್ನು ಎಂಸಿಎಫ್ ಪಡೆದುಕೊಳ್ಳುತ್ತಿದ್ದು, ತಿಂಗಳಿಗೆ 60 ಕೋ.ರೂ. ವೆಚ್ಚವಾಗುತ್ತಿದೆ.