Advertisement
ನಿತ್ಯವೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ರೀಡಿಂಗ್ ಹೌಸ್ ತೆರೆಯುವ ಮೂಲಕ ಮಾದರಿ ಹೆಜ್ಜೆ ಇಡಲಾಗಿದೆ. ನಗರದ ಸುಕಾಲಪೇಟೆ ರಸ್ತೆಯಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಹಲವು ದಿನಗಳ ಹಿಂದೆಯೇ ಆರಂಭಿಸಿರುವ ಗ್ರಂಥಾಲಯ ಆರಂಭಿಕ ಉತ್ಸಾಹಕ್ಕೆ ಸೀಮಿತಗೊಳ್ಳದೇ ತನ್ನ ಸೇವಾ ಕಾರ್ಯ ವಿಸ್ತರಿಸಿದೆ.
Related Articles
Advertisement
ಡಿವೈಎಸ್ಪಿ ಕಾರ್ಯಕ್ಕೆ ಮೆಚ್ಚುಗೆ
ಆರಂಭದಲ್ಲಿ ಪೊಲೀಸ್ ಇಲಾಖೆಯ ಮಕ್ಕಳಿಗೆ ಮಾತ್ರವೆಂದು ಈ ಗ್ರಂಥಾಲಯ ಸೀಮಿತಗೊಳಿಸಲಾಗಿತ್ತು. ನಂತರದಲ್ಲಿ ಹೊರಗಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ಎರಡು ರೀಡಿಂಗ್ ಹೌಸ್ ತೆರೆಯಲಾಗಿದ್ದು, ಅಲ್ಲಿಗೆ ಹೋಗಬೇಕಾದರೆ ಶುಲ್ಕ ಭರಿಸಬೇಕಾಗುತ್ತದೆ. ಆದರೆ, ಇಲ್ಲಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೆಂಬ ಹಿನ್ನೆಲೆಯಲ್ಲಿ ಗ್ರಂಥಾಲಯ ಆರಂಭಿಸಿದೆ. ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರ ಈ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ-ಕಾಲೇಜು ಮುಗಿದ ಬಳಿಕ ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳು ಬುತ್ತಿ ಕಟ್ಟಿಕೊಂಡು ಹೋಗಿ, ಅಲ್ಲಿಯೇ ಊಟ ಮಾಡಿ ಪೊಲೀಸ್ ಠಾಣೆಯಲ್ಲಿ ಲಭ್ಯ ನೀರು ಕುಡಿದು ಸಂಜೆಯ ತನಕ ಓದಲಾರಂಭಿಸಿದ್ದಾರೆ.
ಪೊಲೀಸ್ ಠಾಣೆ ಎಂದರೆ ಅಲ್ಲಿ ಆರೋಪಿಗಳು, ಪೊಲೀಸರು, ಶಿಫಾರಸು ವಹಿಸುವವರ ಅಡ್ಡೆ ಎಂಬುದನ್ನು ಅಲ್ಲಗಳೆಯುವ ರೀತಿಯಲ್ಲಿ ಇಲ್ಲಿನ ಕೇಂದ್ರ ಸೇವೆ ಒದಗಿಸುತ್ತಿದೆ. ಪೊಲೀಸ್ ಅಧಿಕಾರಿಗಳ ವಿನೂತನ ಹೆಜ್ಜೆಗೆ ಸಿಬ್ಬಂದಿ ವರ್ಗದವರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಆಧುನಿಕ ದಿನಗಳಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಓದಿಗೆ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ತೆರೆದ ಗ್ರಂಥಾಲಯ ಜನ ಸ್ನೇಹಿಯಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಬೇಕಿದೆ. -ವೆಂಕಟಪ್ಪ ನಾಯಕ, ಡಿವೈಎಸ್ಪಿ, ಸಿಂಧನೂರು
ಕಳೆದ ಎರಡ್ಮೂರು ತಿಂಗಳಿಂದ ನಮಗೆ ತುಂಬ ಅನುಕೂಲವಾಗಿದೆ. ದಿನದ ಎರಡ್ಮೂರು ತಾಸು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಓದುತ್ತಿರುವುದರಿಂದ ಹೆಚ್ಚು ಸಹಕಾರಿಯಾಗಿದ್ದು, ಪೊಲೀಸ್ ಕಚೇರಿಯೊಳಗೆ ಗ್ರಂಥಾಲಯ ಇರುವುದರಿಂದ ಹೆಚ್ಚಿನ ಭದ್ರತೆಯಿದೆ. -ಸೃಷ್ಟಿ, ಪಿಯುಸಿ ವಿದ್ಯಾರ್ಥಿನಿ, ಸಿಂಧನೂರು
-ಯಮನಪ್ಪ ಪವಾರ