Advertisement

ಗ್ರಾಹಕ ಹಕ್ಕುಗಳ ಬಗೆಗಿನ ಜ್ಞಾನ ಅವಶ್ಯ

09:15 PM Sep 20, 2019 | Lakshmi GovindaRaju |

ಚಾಮರಾಜನಗರ: ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಕುರಿತು ತಿಳಿವಳಿಕೆ ಹೊಂದಿರುವುದು ಅತ್ಯವಶ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ. ಬಸವರಾಜು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲಾ ಗ್ರಾಹಕರ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಹಕರ ರಕ್ಷಣಾ ಕಾಯ್ದೆ (ತಿದ್ದುಪಡಿ) ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಂಚನೆಯ ವಿರುದ್ಧ ಹೋರಾಡಬೇಕು: ಸಮಾಜದಲ್ಲಿ ಬದುಕಬೇಕಾದರೆ ಸಂವಿಧಾನ ಒದಗಿಸಿರುವ ಎಲ್ಲಾ ಹಕ್ಕುಗಳ ಬಗೆಗಿನ ಜ್ಞಾನ ಅಗತ್ಯ. ಇಲ್ಲಿ ಮೋಸ ನಡೆಯುತ್ತಲೇ ಇರುತ್ತದೆ. ಸುಳ್ಳು ಜಾಹೀರಾತುಗಳು ನೋಡುಗರನ್ನು ಮರುಳು ಮಾಡುತ್ತಲೇ ಇರುತ್ತವೆ. ಇಂಥ ಸಮಯದಲ್ಲಿ ನಮ್ಮ ಹಕ್ಕುಗಳನ್ನು ಬಳಸಿ, ವಂಚನೆಯ ವಿರುದ್ಧ ಹೋರಾಡಬೇಕು. ಈ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಹೇಳಿದರು.

ಕಾಲಕ್ಕನುಗುಣವಾಗಿ ಕೆಲವು ತಿದ್ದುಪಡಿ: ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಗ್ರಾಹಕರ ರಕ್ಷಣೆಗಾಗಿ ಯಾವ ಕಾಯ್ದೆ, ಕಾನೂನುಗಳಾಗಲಿ ಇರಲಿಲ್ಲ. 1986ರಲ್ಲಿ ಬಂದ ಗ್ರಾಹಕರ ರಕ್ಷಣಾ ಕಾಯ್ದೆ, ಗ್ರಾಹಕರಿಗೆ ಅಗತ್ಯವಿರುವ ಹಕ್ಕುಗಳನ್ನು ನೀಡಿದೆ. ಜತೆಗೆ ಕಾಲಕ್ಕನುಗುಣವಾಗಿ ಕೆಲವು ತಿದ್ದುಪಡಿಗಳಿಗೂ ಒಳಗಾಗಿದೆ. ಸದ್ಯ ಗ್ರಾಹಕ ರಕ್ಷಣಾ ಕಾಯ್ದೆ, ಸಾರ್ವಜನಿಕರ ಪಾಲಿನ ಅತಿ ದೊಡ್ಡ ಶಕ್ತಿಯಾಗಿದೆ ಎಂದು ತಿಳಿಸಿದರು.

ದೂರು ಸಲ್ಲಿಸಬಹುದು: ಗ್ರಾಹಕರು ಎಂದಾಕ್ಷಣ ಕೇವಲ ಅಂಗಡಿ ವ್ಯಾಪಾರ ನಮ್ಮ ಕಣ್ಣ ಮುಂದೆ ಬರುವುದು ಸಹಜ. ಆದರೆ ಗ್ರಾಹಕರು ಎಂಬ ಸೂಚ್ಯ ಎಲ್ಲಾ ವೃತ್ತಿಗಳಿಗೂ ಅನ್ವಯವಾಗುತ್ತದೆ. ಒಬ್ಬ ವೈದ್ಯರ ಬಳಿ ಹೋಗುವ ರೋಗಿ, ವಕೀಲರಲ್ಲಿಗೆ ತೆರಳುವ ಕಕ್ಷಿದಾರ, ಒಬ್ಬ ವಿದ್ಯಾರ್ಥಿ ಪ್ರತಿಯೊಬ್ಬರೂ ಗ್ರಾಹಕರೇ ಆಗುತ್ತಾರೆ. ಯಾವುದೇ ಸಂದರ್ಭದಲ್ಲಿ ಒಬ್ಬ ಗ್ರಾಹಕ ಮೋಸ ಹೋದಲ್ಲಿ, ಗ್ರಾಹಕರ ರಕ್ಷಣಾ ಕಾಯ್ದೆಯಡಿ ಆತ ದೂರು ಸಲ್ಲಿಸಬಹುದು ಎಂದರು.

Advertisement

ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು: ಮುಖ್ಯ ಅತಿಥಿಯಾಗಿದ್ದ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಗಣಪತಿ. ಜಿ. ಬಾದಾಮಿ ಮಾತನಾಡಿ, ಪ್ರತಿಯೊಬ್ಬನೂ ಒಂದಲ್ಲಾ ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ. ಹೀಗಾಗಿ ತನ್ನ ಹಕ್ಕುಗಳ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಸ್ವಸ್ಥ ಸಮಾಜವನ್ನು ನಿರ್ಮಿಸಲು ಗ್ರಾಹಕ ತನ್ನ ಹಕ್ಕುಗಳನ್ನು ಸಮರ್ಥವಾಗಿ ಬಳಸಬೇಕು ಎಂದು ತಿಳಿಸಿದರು.

ಉದಾಹರಣೆ ಸಹಿತ ಮಾಹಿತಿ: ಸಂಪನ್ಮೂಲ ವ್ಯಕ್ತಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಗೌರಮ್ಮಣ್ಣಿ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯ್ದೆಯಡಿ ಹೇಳಲಾಗಿರುವ ವಿವಿಧ ಗ್ರಾಹಕರ ಬಗ್ಗೆ ಉದಾಹರಣೆ ಸಹಿತ ಮಾಹಿತಿ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ವಕೀಲ ಕೆ. ಬಿ. ತೀರ್ಥಪ್ರಸಾದ್‌ ತಿದ್ದುಪಡಿಯಾದ ಕಾನೂನುಗಳ ಕುರಿತು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎಂ. ಎಸ್‌. ರಾಮಚಂದ್ರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ‌ ಸಿ. ಜಿ. ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ‌ ಉಮ್ಮತ್ತೂರು ಇಂದುಶೇಖರ್‌, ಸರ್ಕಾರಿ ಅಭಿಯೋಜಕಿ ಲೋಲಾಕ್ಷಿ, ಸರ್ಕಾರಿ ವಕೀಲ ಎಚ್‌. ಎನ್‌. ಲೋಕೇಶ್‌, ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್‌, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌. ಮಂಜು ಹರವೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next