ಕಲಬುರಗಿ: ಹೊಟ್ಟೆಗೆ ಅನ್ನ-ಅರಿವಿಗೆ ಜ್ಞಾನ ಅವಶ್ಯಕವಾಗಿದ್ದು, ಒಳ್ಳೆಯ ಮಾತು, ಆಚರಣೆಗೆ ಬದುಕನ್ನೇ ಪರಿವರ್ತಿಸುವ ಶಕ್ತಿಯಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಚಿತ್ತಾಪುರ ತಾಲೂಕಿನ ಬೆಳಗುಂಪಾ ಬೃಹನ್ಮಠದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಪೂರ್ವಭಾವಿಯಾಗಿ ನಡೆದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮದ ದಿಕ್ಸೂಚಿ ಇಲ್ಲದಿದ್ದರೆ ಬದುಕಿಗೆ ಬೆಲೆಯಿಲ್ಲ. ಅಂತರಂಗ ಬಹಿರಂಗ ಶುದ್ಧಿಯೇ ವೀರಶೈವ ಧರ್ಮದ ಪರಮ ಗುರಿಯಾಗಿದೆ ಎಂದು ಹೇಳಿದರು.
ಖಾದರಸಿರಸಗಿಯ ಶ್ರೀ ವಿಜಯಕುಮಾರ ಸ್ವಾಮೀಜಿ, ಹೊನ್ನಕಿರಣಗಿ ಶ್ರೀ ಚಂದ್ರಗುಂಡ ಶಿವಾಚಾರ್ಯ ಸ್ವಾಮೀಜಿ, ಬಡದಾಳ ತೇರಿನಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ನರೇಗಲ್, ನೆಗಳೂರು, ಅಮ್ಮಿನಭಾವಿ, ತೋಟ್ನಳ್ಳಿ, ಸೇಡಂ ಶ್ರೀಗಳು ಉಪದೇಶ ನೀಡಿದರು. ಗಣ್ಯರಿಗೆ ಹಾಗೂ ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತರು.
ಅಡ್ಡಪಲ್ಲಕ್ಕಿ ಮಹೋತ್ಸವ: ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಉತ್ಸವದಲ್ಲಿ ಕುಂಭ ಹೊತ್ತ ಮಹಿಳೆಯರು ಜಾನಪದ ಕಲಾತಂಡ, ಭಜನಾ ಮಂಡಳಿ, ಡೊಳ್ಳು ವಾದ್ಯಗಳೊಂದಿಗೆ ಹೆಜ್ಜೆಹಾಕಿದರು.