ಬಂಟ್ವಾಳ: ಮಾನವ ಬದುಕಿಗೆ ಆಧ್ಯಾತ್ಮಿಕ ರತ್ನತ್ರಯಗಳೆನಿಸಿದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಚಾರಿತ್ಯಗಳನ್ನು ನಿಷ್ಠೆಯಿಂದ ಪಾಲನೆ ಮಾಡಿದಲ್ಲಿ ಪ್ರತಿಯೊಬ್ಬ ಶ್ರಾವಕನೂ ಧರ್ಮ ಸಂಸ್ಕಾರ ಪಡೆದು ಮೋಕ್ಷ ಮಾರ್ಗದಲ್ಲಿ ಸಾಗಬಹುದು ಎಂದು ಮುನಿಶ್ರೀ 108 ವೀರ ಸಾಗರ ಮಹಾರಾಜರು ಹೇಳಿದರು.
ಅವರು ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮೀಜಿ ಜಿನ ಚೈತ್ಯಾಲಯದಲ್ಲಿ ಭವ ಮಂಗಲ ವರ್ಷಾಯೋಗ-ಚಾತುರ್ಮಾಸ್ಯ ಸಂದರ್ಭ ಮಂಗಲ ಪ್ರವಚನ ನೀಡಿದರು.
ಇದೇ ಸಂದರ್ಭ ಮುನಿಶ್ರೀ ಪಾವನ ಸಾನ್ನಿಧ್ಯದಲ್ಲಿ ಮಂಗಳೂರಿನ ಇಂದಿರಾ ದೇವಿಯಮ್ಮ ಮತ್ತು ಮಕ್ಕಳು, ರಾಜಗೃಹ ವತಿಯಿಂದ ಆರಾಧನೆ ನಡೆಯಿತು.
ಮಂಗಲ ಪ್ರವಚನದ ಬಳಿಕ ಧರ್ಮ ಸಭೆಯಲ್ಲಿ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಉತ್ತರಿಸಿ ಸಂದೇಹ ನಿವಾರಿಸಿದರು.
ಮಂಗಳೂರು, ಮೂಡಬಿದಿರೆ, ವೇಣೂರು, ಪುತ್ತೂರು, ಕಾರ್ಕಳ, ಕಳಸ ಮೊದಲಾದ ಕಡೆಗಳಿಂದ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಡಾ| ನೀತಾ ರಾಜೇಂದ್ರ ಕುಮಾರ್, ಮಂಜುಳಾ ಅಭಯಚಂದ್ರ ಜೈನ್, ಚಾತುರ್ಮಾಸ್ಯ ಸಮಿತಿಯ ಪ್ರಮುಖರಾದ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರ ಇಂದ್ರ, ಸುಭಾಶ್ಚಂದ್ರ ಜೈನ್, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಆದಿರಾಜ್ ಜೈನ್, ಭರತ್‌ರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.