ಹೊಳಲ್ಕೆರೆ: ಶರಣರು 21ನೇ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಜಾತಿ ಸಮುದಾಯ ಎನ್ನದೆ ಎಲ್ಲರಲ್ಲೂ ಸಮಾನತೆ ಸಂದೇಶ ಬಿತ್ತಿಸಿದ್ದರು. ಇಂದಿನ ಶಿವಸಂಚಾರ ನಾಟಕ ಅಂಧಕಾರದಲ್ಲಿರುವ ಜನರನ್ನು ಜ್ಞಾನದ ಕಡೆಗೆ ಸಾಗಲು ಜಾಗೃತಿ ಮೂಡಿಸುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘದ ಹಾಗೂ ನಾಗರಿಕರ ಸಹಯೋಗದಲ್ಲಿ ಆಯೋಜಿಸಿದ್ದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಟಕ ಎನ್ನುವುದು ಕೇವಲ ಮನರಂಜನೆ ವಸ್ತು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪರಿವರ್ತನೆಗೆ ಬೇಕಾದ ಮಾನವೀಯ ಮೌಲ್ಯಯುತ ಸಂದೆೇಶಗಳನ್ನು ಬಿತ್ತರಿಸುವ ಮಾಧ್ಯಮವಾಗಿದೆ. ಆಧುನಿಕತೆ ಸೆಳೆತದಲ್ಲಿರುವ ಇಂದಿನ ಜನರಿಗೆ ನಾಟಕದ ಮೂಲಕ ಹೊಸ ಆಲೋಚನೆಗಳನ್ನು ಹುಟ್ಟಿಸುವ ನಿಟ್ಟಿನಲ್ಲಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ರಂಗ ಪ್ರಯೋಗ ಮಾರ್ಗದಲ್ಲಿ ಸಾಗಲು ಚಿಂತಿಸಿದರು ಎಂದರು.
ಶ್ರೀ ಶಿವಕುಮಾರ ಕಲಾಸಂಘದಿಂದ ಆರಂಭವಾದ ನಾಟಕ ಗೀಳು ಶಿವಸಂಚಾರ ಎನ್ನುವ ಕಲ್ಪನೆಯೊಂದಿಗೆ ನಾಡಿನುದ್ದಕ್ಕು ಸಂಚರಿಸುತ್ತಿದೆ. ಈ ಮೂಲಕ ಸಾಮಾಜಿಕ ಸ್ಥಿತಿಗತಿಗಳು, ಕಂದಾಚಾರ, ಮೂಢನಂಬಿಕೆ, ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಶುದ್ಧ ಸಮಾಜ ಕಟ್ಟಲು ಶ್ರಮಿಸುತ್ತಿದ್ದಾರೆ ಎಂದರು.
ನಾವೆಲ್ಲ ನಾಟಕ ನೋಡಲು ಸಾಣೇಹಳ್ಳಿಗೆ ಹೊಗಬೇಕು ಎನ್ನುವಷ್ಟು ಶ್ರೇಷ್ಠವಾಗಿರುವ ರಂಗಭೂಮಿಯನ್ನು ಸೃಷ್ಠಿಸಿದ್ದಾರೆ. ಶ್ರೀಗಳ ಸಾರಥ್ಯದಲ್ಲಿರುವ ಶಿವಸಂಚಾರ ನಾಟಕ ತಂಡದ ಕಲಾವಿದರು ಇಲ್ಲಿಗೆ ಆಗಮಿಸಿದ್ದಾರೆ. ಪ್ರತಿಯೊಬ್ಬರು ಇಲ್ಲಿ ನಡೆಯುವ ಮೂರು ದಿನಗಳ ನಾಟಕ ಪ್ರದರ್ಶನ ವೀಕ್ಷಿಸಬೇಕು. ಅ ಮೂಲಕ ಬದಲಾವಣೆ ಸಂದೇಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಪಪಂ ಅಧ್ಯಕ್ಷೆ ಸವಿತಾ ಬಸವರಾಜ್, ಸದಸ್ಯ ಕೆ.ಸಿ. ರಮೇಶ್, ಇಂದ್ರಪ್ಪ, ಚಿಕ್ಕಜಾಜೂರು ಗ್ರಾಪಂ ಅಧ್ಯಕ್ಷ ಡಿ.ಸಿ. ಮೋಹನ್, ವಕೀಲರಾದ ಎಸ್.ಎಂ. ಅನಂದಮೂರ್ತಿ, ಬಸವರಾಜ್, ಕೆ.ಎಸ್.ತಿಪ್ಪೇಸ್ವಾಮಿ, ಎ.ಸಿ. ಗಂಗಾಧರಪ್ಪ, ಗುಂಜಿಗನೂರು ಇಂದಪ್ಪ, ಶಿವಸಂಚಾರ ನಾಟಕ ಕಲಾವಿದರು ಇದ್ದರು. ‘ಊರು ಸುಟ್ಟರೂ ಹನುಮಪ್ಪ ಹೊರಗ’ಎನ್ನುವ ನಾಟಕ ಪ್ರದರ್ಶಿಸಲಾಯಿತು. ಹನುಮಂತ ಹಾಲಿಗೇರಿ ರಚನೆ, ಮಾತೇಶ ಬಡಿಗೇರ ನಿರ್ದೇಶನ, ಸರೋಜಾ ನಿಂಬನಗೌಡರ ನಿರ್ವಹಣೆ, ನೆರಳು ಬೆಳಕು ಜೀವನಗೌಡ, ಸಂಗೀತ ರಮೇಶ್ ಕುರುಬಗಟ್ಟೆ ನೀಡಿದ್ದರು.