ನವದೆಹಲಿ: ಕೊರೊನಾ ಸಾಂಕ್ರಾಮಿಕವು ಜಗತ್ತಿಗೆ ಹಲವು ಪಾಠಗಳನ್ನು ಕಲಿಸಿತು. ಅನೇಕರು ತುತ್ತು ಅನ್ನಕ್ಕೂ ಪರದಾಡಿದರು, ಇನ್ನು ಕೆಲವರು ಇದ್ದ ಕೆಲಸವನ್ನೂ ಕಳೆದುಕೊಂಡರು, ಮತ್ತೆ ಕೆಲವರು ಸ್ಥಿರ ಆದಾಯಕ್ಕಾಗಿ ಹರಸಾಹಸ ಪಟ್ಟರು. ಈ ಎಲ್ಲ ಸಂಕಷ್ಟಗಳ ನಡುವೆಯೂ ಜನರು ಮತ್ತೆ ತಮ್ಮ ಬದುಕು ಕಟ್ಟಿಕೊಂಡಿದ್ದು ಅವರ ಜೀವನಪ್ರೀತಿಗೆ ಸಾಕ್ಷಿ. ಅಂಥದ್ದೊಂದು ಸ್ಫೂರ್ತಿದಾಯಕ ವ್ಯಕ್ತಿಯೇ ಶೇಖ್ ಅಬ್ದುಲ್ ಸತ್ತಾರ್.
ಓಲಾ, ಸ್ವಿಗ್ಗಿ, ಊಬರ್, ರ್ಯಾಪಿಡೋ, ಜೊಮ್ಯಾಟೋಗಳಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸತ್ತಾರ್, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಬದಲಾದ ಕಥೆಯಿದು.
ಡೆಲಿವರಿ ಬಾಯ್ ಆಗಿಯೇ ಪಾರ್ಟ್‌ಟೈಂ ಕೆಲಸ ಮಾಡುತ್ತಾ ತನ್ನ ಡಿಗ್ರಿ ಪೂರೈಸಿದ ಸತ್ತಾರ್, ಲಿಂಕ್ಡ್ಇನ್‌ನಲ್ಲಿ ತಮ್ಮ ಬದುಕಿನ ಪಯಣವನ್ನು ವಿವರಿಸಿದ್ದಾರೆ.
“ಅಪ್ಪ ಗುತ್ತಿಗೆ ಕಾರ್ಮಿಕನಾಗಿರುವ ಕಾರಣ, ಮನೆಯಲ್ಲಿ ಬಡತನವಿತ್ತು. ಹಾಗಾಗಿ, ಓದುವುದರ ಜೊತೆಗೆ ಮನೆಗೆ ನನ್ನಿಂದಾದ ಸಹಾಯವನ್ನೂ ಮಾಡಬೇಕಾಗಿತ್ತು. ಅದೇ ಕಾರಣಕ್ಕೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡತೊಡಗಿದೆ. ಒಂದು ದಿನ ನನ್ನ ಗೆಳೆಯನೊಬ್ಬ, “ನೀನೇಕೆ ಕೋಡ್ ಕಲಿಯಬಾರದು’ ಎಂದು ಪ್ರಶ್ನಿಸಿದ್ದ.
ಅದನ್ನು ಗಂಭೀರವಾಗಿ ತೆಗೆದುಕೊಂಡ ನಾನು ಬೆಳಗಿನ ಹೊತ್ತು ನೆಕ್ಸ್ಟ್ ವೇವ್‌ನಲ್ಲಿ ಕೋಡಿಂಗ್ ಕೌಶಲ್ಯವನ್ನು ಕಲಿಯತೊಡಗಿದೆ.
ಡೆಲಿವರಿ ಕೆಲಸದಿಂದ ಅಲ್ಪಸ್ವಲ್ಪ ಸಂವಹನ ಕೌಶಲ್ಯವೂ ಬೆಳದಿತ್ತು. ಅದು ನನಗೆ ಇಲ್ಲಿ ಸಹಾಯ ಮಾಡಿತು. ಈಗ ಪ್ರೋಬ್ ಇನಾರ್ಮೇಷನ್ ಸರ್ವಿಸಸ್ ಪ್ರೈ.ಲಿ. ನನಗೆ ಉದ್ಯೋಗ ನೀಡಿತು. ಡೆಲಿವರಿ ಬಾಯ್ ಆಗಿದ್ದ ನಾನು ಸಾಫ್ಟ್ ವೇರ್ ಎಂಜಿನಿಯರ್ ಆದೆ’ ಎನ್ನುತ್ತಾರೆ ಸತ್ತಾರ್.ಅವರ ಈ ಪೋಸ್ಟ್ ವೈರಲ್ ಆಗಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.