ಚಳಿಗಾಲ ಬಂತೆಂದರೆ, ಮಂಡಿನೋವಿನದ್ದೇ ಮಂಡೆಬಿಸಿ. ಮನೆಯಲ್ಲಿ ದಿನವಿಡೀ ದುಡಿಯುವ ಮಹಿಳೆಯರಿಗೆ ಗಂಟು ನೋವಿನ ಸಮಸ್ಯೆ ತೀವ್ರ. ಅಧ್ಯಯನವೊಂದರ ಪ್ರಕಾರ, ಶೇ.15ಕ್ಕಿಂತ ಹೆಚ್ಚು ಮಹಿಳೆಯರನ್ನು ಸಂಧಿವಾತ ಕಾಡುತ್ತಿದೆ. 25ರಿಂದ 50 ವರ್ಷ ವಯೋಮಾನದವರಲ್ಲಿ ಒಂದಲ್ಲ ಒಂದು ರೀತಿಯ ಸಂಧಿವಾತದ ಸಮಸ್ಯೆ ಕಂಡುಬರುತ್ತದೆ. ಪರೀಕ್ಷೆಗೊಳಗಾಗುವ ಪ್ರತಿ ಐದು ಮಹಿಳೆಯರ ಪೈಕಿ ನಾಲ್ವರಲ್ಲಿ ಸಂಧಿವಾತ ದೃಢಪಡುತ್ತದೆ.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಂಧಿವಾತಕ್ಕೆ ಮುಖ್ಯ ಕಾರಣ, ಮಂಡಿಚಿಪ್ಪಿನ ಸವೆತ. ಜೊತೆಗೆ ವಂಶವಾಹಿ ಕಾರಣಗಳು, ಮಂಡಿಯ ಮೇಲೆ ಸತತವಾದ ಒತ್ತಡ, ಬೊಜ್ಜು ಮತ್ತು ವ್ಯಾಯಾಮದ ಕೊರತೆಯೂ ಹೌದು. ಮೊಣಕಾಲಿನ ಜೊತೆಗೆ ಮಣಿಕಟ್ಟು, ಹಿಮ್ಮಡಿ, ಕೈಗಳು ಗಡುಸಾಗಿರುತ್ತವೆ. ನೋವು, ಆ ನೋವಿರುವ ಸ್ಥಳ ಕೆಂಪಗಾಗಿರುವುದು, ಊದಿಕೊಂಡಿರುವುದು ಕಂಡುಬರುತ್ತದೆ. ಋತುಸ್ರಾವದ ವೇಳೆಯೂ ಮಂಡಿನೋವಿನ ಸಮಸ್ಯೆ ಹೆಚ್ಚಿರುತ್ತದೆ.
ರೋಗಪತ್ತೆ, ರೋಗಲಕ್ಷಣಗಳು, ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವಿಕೆ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ. ಫೋರ್ಟಿಸ್ ಆಸ್ಪತ್ರೆಯ ಮೂಳೆರೋಗಶಾಸ್ತ್ರದ ನಿರ್ದೇಶಕರಾದ ಡಾ. ನಾರಾಯಣ ಹುಲ್ಸೆ ಅವರು ಮಂಡಿನೋವು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ. ಚಟುವಟಿಕೆರಹಿತ ಜೀವನ ನಡೆಸುವುದರಿಂದ ಮಂಡಿಯ ಕೀಲುಗಳು ಬಾಧಿಸಲ್ಪಡುತ್ತವೆ, ವ್ಯಾಯಾಮದ ಕೊರತೆ, ಅಧಿಕ ದೇಹತೂಕ, ಮತ್ತು ಪೌಷ್ಟಿಕತೆಯಿಲ್ಲದ ತಿನಿಸುಗಳು ನಿಮ್ಮ ಮಂಡಿಯನ್ನು ಹಾನಿಗೊಳಪಡಿಸಿ ದುರ್ಬಲಗೊಳಿಸಿ, ಮೃದುಎಲುಬನ್ನು ಸವೆಸುತ್ತದೆ. ಈ ರೀತಿ ಸವೆದ ಮೃದುಎಲುಬನ್ನು ಪುನಃಶ್ಚೇತನಗೊಳಿಸುವುದು ಅಸಾಧ್ಯವಾದರೂ, ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವುದರಿಂದ ದೀರ್ಘಕಾಲದಲ್ಲಿ ಮಂಡಿ ಮೃದುಎಲುಬಿನ ಸವೆತದ ವೇಗವನ್ನು ತಗ್ಗಿಸಬಹುದು.
ನಿಮ್ಮ ಚಲನೆ ಮತ್ತು ಜೀವನದ ಗುಣಮಟ್ಟವನ್ನು ಬಾಧಿಸುವ ಮಟ್ಟಿಗೆ ಸಂಧಿವಾತವು ತೀವ್ರಗೊಂಡಿದ್ದರೆ, ಮಂಡಿ ಮರುಜೋಡಣೆ ಅತ್ಯಂತ ವಾಸ್ತವವಾದ ಚಿಕಿತ್ಸಾ ವಿಧಾನವಾಗಿದೆ. ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಎಂದರೆ ಭಯವಾದರೂ ಇತ್ತೀಚಿನ ತಂತ್ರಜಾnನವು ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸರಳ, ಶೀಘ್ರ ಹಾಗೂ ಪರಿಣಾಮಕಾರಿಯನ್ನಾಗಿ ಮಾಡಿದೆ.
ಸಂಧಿವಾತದಿಂದ ತಪ್ಪಿಸಿಕೊಳ್ಳಲು…
– ದೀರ್ಘಕಾಲ ಕುಳಿತುಕೊಳ್ಳಬೇಕಾದ ಸಂದರ್ಭದಲ್ಲಿ, ಮಧ್ಯೆ ಮಧ್ಯೆ ಬಿಡುವು ಪಡೆದು ನಿಮ್ಮ ಕಾಲುಗಳನ್ನು ಚಾಚಲು ಮತ್ತು ಮಂಡಿ ಚಲನೆ ಮಾಡಿಕೊಳ್ಳಿ.
– ಮಧ್ಯಮ ಪ್ರಮಾಣದಲ್ಲಾದರೂ ನಿಯಮಿತವಾಗಿ ವ್ಯಾಯಾಮ ಮಾಡಿ. ನಿಮಗೆ ಅಸಾಧ್ಯವಾಗುವಂಥ ಕೆಲಸ ಮಾಡಲು ಪ್ರಯತ್ನಿಸಬೇಡಿ.
– ಬೆಳಗಿನ ಎಳೆಬಿಸಿಲು ದೇಹದ ಮೇಲೆ ಬೀಳಬೇಕು. ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಮುಖ್ಯವಾದ “ಡಿ’ ವಿಟಮಿನ್ ಅನ್ನು ಪೂರೈಸುತ್ತದೆ.
– ಹಸಿರೆಲೆ ತರಕಾರಿಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೀಜಗಳು, ಮೀನು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
– ಕುಳಿತಿರುವಾಗಲೇ ಆಗಲಿ, ನಡೆಯುತ್ತಿರುವಾಗಲೇ ಆಗಲಿ, ನಿಮ್ಮ ದೇಹದ ಭಂಗಿಯ ಬಗ್ಗೆ ಎಚ್ಚರಿಕೆ ಇರಲಿ.
ಅಮೃತ