ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗೆ ಕಾರಣರಾದರು ಎಂಬ ಆರೋಪ ಹೊತ್ತಿರುವ ಕೆ.ಎನ್.ರಾಜಣ್ಣ, ಇದೀಗ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.
ಸೂಪರ್‌ಸೀಡ್ ಮಾಡಿದ ಸಂದರ್ಭದಲ್ಲಿ, ‘ಇನ್ನೆರಡು ದಿನಗಳಲ್ಲಿ ಸಮ್ಮಿಶ್ರ ಸರ್ಕಾರವೇ ಬಿದ್ದು ಹೋಗುತ್ತದೆ. ಸೂಪರ್‌ಸೀಡ್ ಆದೇಶ ರದ್ದಾಗುತ್ತದೆ. ಮತ್ತೆ ನಾನು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಬಂದು ಕೂರುತ್ತೇನೆ’ ಎಂದು ರಾಜಣ್ಣ ಹೇಳಿದ್ದರು.
ಇಷ್ಟೇ ಅಲ್ಲದೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಶುಕ್ರವಾರ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಹಾಜರಾಗಿ ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್‌ನವರು ಯಾರೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಆದೇಶ ಹೊರಡಿಸಿದ್ದರೂ ಕ್ಯಾರೇ ಎನ್ನದೆ ಕೆ.ಎನ್.ರಾಜಣ್ಣ, ರಾಜಭನವನಕ್ಕೆ ಹೋಗಿ ಬಿಜೆಪಿಯವರಿಗೆ ಅಚ್ಚರಿ ಮೂಡಿಸಿದ್ದರು. ರಾಜಣ್ಣ ಅವರಿಗೆ ಡಾ.ಜಿ.ಪರಮೇಶ್ವರ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಹಿಂದೊಮ್ಮೆ ಪಕ್ಷದಿಂದ ನೋಟಿಸ್ ಕೊಡಲಾಗಿತ್ತು.
Advertisement
ಜುಲೈ 20ರಂದು ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್‌ನ್ನು ಸೂಪರ್‌ಸೀಡ್ ಮಾಡಿ ಸಮ್ಮಿಶ್ರ ಸರ್ಕಾರ ಕೈಗೊಂಡಿದ್ದ ತೀರ್ಮಾನಕ್ಕೆ ಸೆಡ್ಡು ಹೊಡೆದು, ಸಹಕಾರ ಸಂಘಗಳ ಅಪರ ನಿಬಂಧಕರ ನ್ಯಾಯಾಲ ಯದ ಮೊರೆ ಹೋಗಿ ತಡೆಯಾಜ್ಞೆ ತರುವ ಮೂಲಕ ಮತ್ತೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
‘ನಾನು ಬಿಜೆಪಿಗೆ ಹೋಗಲ್ಲ’
ತುಮಕೂರು: ‘ನಾನು ಬಿಜೆಪಿಗೆ ಹೋಗಲ್ಲ. ಚುನಾವಣೆಗೂ ನಿಲ್ಲಲ್ಲ’ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರವನ್ನು ಯಾರೂ ಬೀಳಿಸಿಲ್ಲ. ಅದೇ ಬಿದ್ದು ಹೋಗಿದೆ. ಪಾಪದ ಕೊಡ ತುಂಬಿ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದರೆ ಮುಂದೆ ಕಾಂಗ್ರೆಸ್ ಸೊನ್ನೆಯಾಗಲಿದೆ. ಜೆಡಿಎಸ್‌ನವರು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತೀವಿ ಎಂದು ಘೋಷಿಸುತ್ತಾರೆ. ಅವರೆಲ್ಲಾ ವ್ಯಾಪಾರಸ್ಥರು, ವ್ಯವಹಾರ ನಡೆಯಲು ಏನು ಬೇಕಾದರೂ ಮಾಡುತ್ತಾರೆ ಎಂದರು. ಸಿದ್ದರಾಮಯ್ಯನವರು ಕಾಂಗ್ರೆಸ್‌ನ ವಿಪಕ್ಷ ನಾಯಕರಾಗಬೇಕು. ಆಗ ಪಕ್ಷಕ್ಕೆ ಶಕ್ತಿ ಬರುತ್ತದೆ. ಪರಮೇಶ್ವರ್ ಹಿಂದೆ ಒಬ್ಬ ಶಾಸಕರೂ ಇಲ್ಲ ಎಂದು ಕಿಚಾಯಿಸಿದರು.