ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಜಿಲ್ಲೆಯಲ್ಲಿ ಬಿಜೆಪಿಗೆ ಮತ್ತೂಂದು ಶಾಕ್ ನೀಡಿದ್ದು, ಜಿಪಂ ಅಧ್ಯಕ್ಷ ಸ್ಥಾನ ತೆಕ್ಕೆಗೆ ತೆಗೆದುಕೊಂಡ ಎರಡೇ ತಿಂಗಳ ಅವಧಿಯಲ್ಲಿ ಇದೀಗ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನೂ ಕೈ ವಶ ಮಾಡಿಕೊಂಡಿದ್ದಾರೆ.
ಬೆಳಗ್ಗೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಾಳೆಯ ಸೇರಿದ್ದ ಬಸವರಾಜ ಅರಬಗೊಂಡ ಅವರನ್ನು ಕಾಂಗ್ರೆಸ್ ಬೆಂಬಲ ನೀಡಿ, ಧಾರವಾಡ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಅಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕ ಶಂಕರ ಮುಗದ ಹಾಗೂ ಬಸವರಾಜ ಅರಬಗೊಂಡ ನಾಮಪತ್ರ ಸಲ್ಲಿದ್ದರು. ಒಕ್ಕೂಟದ 12 ಜನ ನಿರ್ದೇಶಕರು ಸೇರಿ ಒಟ್ಟು 15 ಮತಗಳು ಚಲಾವಣೆಯಾಗಿವೆ. ಈ ಪೈಕಿ ಶಂಕರ ಮುಗದ 6 ಮತಗಳನ್ನು ಪಡೆದರೆ, ಬಸವರಾಜ ಅರಬಗೊಂಡ 8 ಮತಗಳನ್ನು ಪಡೆದಿದ್ದು, 1 ಮತ ತಿರಸ್ಕೃತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬೇಕಿರುವಷ್ಟು ಸಂಖ್ಯೆಯನ್ನು ಬಿಜೆಪಿ ಹೊಂದಿದ್ದ ಹಿನ್ನೆಲೆಯಲ್ಲಿ ಈ ಬಾರಿ ಸಹ ಕೆಎಂಎಫ್ ಅಧಿಕಾರವನ್ನು ಬಿಜೆಪಿ ಹಿಡಿಯಲಿದೆ ಎಂಬ ಭಾವನೆ ಎಲ್ಲರಲ್ಲಿ ಮೂಡಿತ್ತು. ಆದರೆ ಬಸವರಾಜ ಅರಬಗೊಂಡ ಅವರು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಮೂಲಕ ಬಿಜೆಪಿ ನಿರಾಸೆ ಅನುಭವಿಸುವಂತಾಗಿದೆ. ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಕ್ಕೆ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದವರು ಏ. 28ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.