ಬೆಳಗಾವಿ: ಅಂತಿಮ ಕ್ಷಣದಲ್ಲಿ ಯಾವುದೇ ನಾಟಕೀಯ ಬೆಳವಣಿಗೆಗಳು ನಡೆಯದಿದ್ದರೆ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ.31ರಂದು ಮಧ್ಯಾಹ್ನ ನಡೆಯಲಿದೆ. ಸರ್ಕಾರದ ಇಬ್ಬರು ಅಧಿಕಾರಿಗಳು ಸೇರಿ ಒಟ್ಟು 16 ಜನ ನಿರ್ದೇಶಕರು ಮತದಾನದ ಹಕ್ಕು ಹೊಂದಿದ್ದು, ಅವಿರೋಧ ಆಯ್ಕೆಗೆ ಜಾರಕಿಹೊಳಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ
“ಉದಯವಾಣಿ’ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, “16 ಜನರ ಪೈಕಿ ಇಬ್ಬರು ಅಧಿಕಾರಿಗಳು ಸೇರಿದಂತೆ 13 ಮಂದಿಯ ಬೆಂಬಲ ನನಗಿದೆ.
ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರಿಗೆ ಅದೇ ಪಕ್ಷದ ಬಂಡೆಪ್ಪ ಕಾಶೆಂಪುರ ಅವರ ಸಹೋದರನ ಬೆಂಬಲ ಮಾತ್ರ ಇದೆ. ಕಾಂಗ್ರೆಸ್‌ನ ಭೀಮಾ ನಾಯಕ ಏಕಾಂಗಿಯಾಗಿ ನಿಂತಿದ್ದಾರೆ’ ಎಂದರು. ಉತ್ತರ ಕರ್ನಾಟಕದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿ ಕೊಂಡಿ ದ್ದೇನೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ಅದರ ಲಾಭವನ್ನು ರೈತರಿಗೆ ತಂದು ಕೊಡುವುದು ನನ್ನ ಮುಖ್ಯ ಉದ್ದೇಶ. ಈಗಾಗಲೇ ಎಲ್ಲ ನಿರ್ದೇಶಕರ ಜೊತೆ ಮಾತನಾಡಿದ್ದೇನೆ.
ಎಲ್ಲರೂ ತಮ್ಮ ಪರವಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಸಾಧ್ಯವಾದಷ್ಟು ಅವಿರೋಧ ಆಯ್ಕೆಗೆ ಪ್ರಯತ್ನ ಮಾಡುತ್ತೇನೆ. ಅನಿವಾರ್ಯವಾದರೆ ಚುನಾವಣೆ ಎದುರಿಸುತ್ತೇನೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು. ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾಗಿ ಆಯ್ಕೆಯಾದರೆ ಈ ಮಹತ್ವದ ಹುದ್ದೆ ಅಲಂಕರಿಸಿದ ಉತ್ತರ ಕರ್ನಾಟಕದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಕೆಎಂಎಫ್ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಬಾಲಚಂದ್ರ, ಅದಕ್ಕಾಗಿ ಸಚಿವ ಸ್ಥಾನ ಕೈ ಬಿಟ್ಟು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.