Advertisement

Udupi; “ಕೆಎಂಎಫ್ ನಂದಿನಿ’ ದೇಶದ ಹೆಮ್ಮೆ: ಯಶ್‌ಪಾಲ್‌

10:06 PM Jan 21, 2024 | Team Udayavani |

ಉಡುಪಿ: ಸ್ಥಳೀಯ ಮಾರುಕಟ್ಟೆ ಹೊರತಾಗಿಯೂ ರಾಜ್ಯ, ಹೊರ ರಾಜ್ಯಗಳ ವಿದೇಶಗಳಲ್ಲೂ ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು ದೇಶದಲ್ಲಿ ಕ್ಷೀರಕ್ರಾಂತಿಗೆ ನಂದಿನಿ ಬ್ರ್ಯಾಂಡ್‌ ಕಾರಣವಾಗಿದೆ. ಕೆಎಂಎಫ್ ನಂದಿನಿ ದೇಶದ ಹೆಮ್ಮೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಬಣ್ಣಿಸಿದರು.

Advertisement

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಉಡುಪಿಯ ಉಪ್ಪೂರು ಡೈರಿ ಆವರಣದಲ್ಲಿ ರವಿವಾರ ಜರಗಿದ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಾಹಾರ ಗೃಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಡಿ. ಪ್ರಸ್ತಾವನೆಗೈದು, ಉಪ್ಪೂರಿನ ಘಟಕದಲ್ಲಿ 150ಕ್ಕೂ ಅಧಿಕ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಊಟೋಪಚಾರಕ್ಕೆ ವ್ಯವಸ್ಥಿತ ಉಪಾಹಾರಗೃಹದ ಅನಿವಾರ್ಯ ಇದ್ದು, ಅದರಂತೆ ಉಪಾಹಾರ ಗೃಹ ಮತ್ತು ತರಬೇತಿ ಕೇಂದ್ರವನ್ನು 1.20 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. 4.10 ಕೋ.ರೂ. ವೆಚ್ಚದಲ್ಲಿ ಆಡಳಿತ ಕಚೇರಿಯನ್ನು ನಿರ್ಮಿಸಲಾಗುತ್ತದೆ. ಒಕ್ಕೂಟದಲ್ಲಿ ಪ್ರಸ್ತುತ 4 ವಿವಿಧ ಮಾದರಿಯ ಹಾಲು, ಮೊಸರು, 2 ಮಾದರಿ ಲಸ್ಸಿ, 4 ಮಾದರಿಯ ಮಜ್ಜಿಗೆ, ಪೇಡಾ, ಮೈಸೂರುಪಾಕ್‌ ಸಹಿತ 16 ಉತ್ಪನ್ನ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಒಕ್ಕೂಟದಿಂದಲೇ ನಂದಿನಿ ತುಪ್ಪದ ಸರಬರಾಜು ಮಾಡಲಾಗುತ್ತಿದೆ ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಉಪ್ಪೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಒಕ್ಕೂಟದ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ಸಾಣೂರು ನರಸಿಂಹ ನಾಯಕ್‌, ಬಿ. ಸುಧಾಕರ ರೈ, ಸುಧಾಕರ ಶೆಟ್ಟಿ, ಸವಿತಾ ಎನ್‌. ಶೆಟ್ಟಿ, ಸ್ಮಿತಾ ಆರ್‌. ಶೆಟ್ಟಿ, ಬಿ. ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಟಾರ್‌, ಉಪನಿರ್ದೇಶಕ ಡಾ| ಅರುಣ ಕುಮಾರ್‌ ಶೆಟ್ಟಿ ಎನ್‌. ಉಪಸ್ಥಿತರಿದ್ದರು.

ಮಾರುಕಟ್ಟೆ ಉಪ ವ್ಯವಸ್ಥಾಪಕ ಸುಧಾಕರ್‌, ವಿಸ್ತರಣಾಧಿ ಕಾರಿ ರಾಜಾರಾಮ್‌ ನಿರೂಪಿಸಿದರು. ಒಕ್ಕೂಟದ ನಿರ್ದೇಶಕ ಕೆ. ರವಿರಾಜ ಹೆಗ್ಡೆ ವಂದಿಸಿದರು.

Advertisement

ಮಣಿಪಾಲದಲ್ಲಿ ಐಸ್‌ಕ್ರೀಂ ಘಟಕ
ಕೆಎಂಎಫ್ನ ಹಳೆಯ ಮಣಿಪಾಲ ಘಟಕವು 2 ಎಕರೆ ವಿಶಾಲ ಜಾಗ ಹೊಂದಿದ್ದು, ಇಲ್ಲಿ ಐಸ್‌ಕ್ರೀಂ ಸಹಿತ ಬೇರೆ ಉತ್ಪನ್ನಗಳ ತಯಾರಿಸಲು ಘಟಕವನ್ನು ರೂಪಿಸಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲು ಕಾರಣವಾಗುತ್ತದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ಗರಿಷ್ಠ ಪ್ರಮಾಣದ ಸಹಾಯಧನ ಒದಗಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಪ್ರೋತ್ಸಾಹಧನ ಹೆಚ್ಚಿಸಲು ಮನವಿ
ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಕಾರ್ಮಿಕರ ಕೊರತೆ, ಹಸಿ ಹುಲ್ಲು, ಜಾನುವಾರು ಮೇವು ಅಲಭ್ಯತೆ, ಪಶು ಆಹಾರ ದರ ಹೆಚ್ಚಳವಾಗಿದೆ. ಅಲ್ಲದೆ ಹೈನುಗಾರಿಕೆಗೆ ಪ್ರತಿಕೂಲ ವಾತಾವರಣ ನಮ್ಮಲ್ಲಿದ್ದು, ಸರಕಾರವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅನ್ಯ ಜಿಲ್ಲೆಗಳಿಗಿಂತ ಈ ಭಾಗದ ರೈತರಿಂದ ಸಂಗ್ರಹಿಸುವ ಹಾಲಿಗೆ ಕನಿಷ್ಠ ಲೀ.ಗೆ 5 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next