ಕಲಬುರಗಿ: 371ನೇ (ಜೆ) ವಿಧಿ ಪರಿಣಾಮಕಾರಿ ಜಾರಿ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗಲು ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಭಾವಾಂತರ ಯೋಜನೆ ಕಾರ್ಯಾನುಷ್ಠಾನ ತರುವಂತೆ ಹಾಗೂ ಬಂದ್ ಆಗಿರುವ ದಾಲ್‌ಮಿಲ್‌ಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಗುರುವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಒತ್ತಾಯಿಸಿತು.
ಮಾಜಿ ಸಚಿವ, ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಹಾಗೂ ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ತಂತ್ರಜ್ಞರನ್ನು ಒಳಗೊಂಡ ಸುಮಾರು 60 ಜನರ ಬೃಹತ್ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹೈದ್ರಾಬಾದ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸ್ಪಂದಿಸಬೇಕೆಂದು ಆಗ್ರಹಿಸಿತು.
ಬೆಂಬಲ ಬೆಲೆಯಲ್ಲಿ ಕೃಷಿ ಧಾನ್ಯ ಖರೀದಿ ಮಾಡುತ್ತಿರುವುದರಿಂದ ದ್ವಿದಳ ಧಾನ್ಯ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಭಾವಾಂತರ ಯೋಜನೆ ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತಂದರೆ ರೈತರ ಜತೆಗೆ ವ್ಯಾಪಾರಿಗಳಿಗೂ ಸಹಾಯವಾಗುತ್ತದೆ.
ಅಲ್ಲದೆ ತೊಗರಿ ಬೇಳೆ ಬೆಲೆ ಕುಸಿತದಿಂದ ಹೈ.ಕ ಭಾಗದಲ್ಲಿರುವ ಶೇ. 90ರಷ್ಟು ದಾಲ್‌ಮಿಲ್‌ಗಳು ಮುಚ್ಚಿವೆ. ಹೀಗಾಗಿ ದಾಲ್‌ಮಿಲ್ ಮಾಲೀಕರು ಬೀದಿಗೆ ಬಂದಿದ್ದಾರೆ. ಇದಕ್ಕಾಗಿ ಪುನಶ್ಚೇತನ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವಿಶೇಷ ಪ್ಯಾಕೇಜ್, ವಿದ್ಯುತ್ ದರ ಸಬ್ಸಿಡಿ ಮುಂತಾದ ಸೌಲಭ್ಯಗಳಿಗೆ ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕಾಗಿದೆ ಎಂದು ಸಿಎಂ ಗಮನಕ್ಕೆ ತರಲಾಯಿತು. ತುಮಕೂರುದಲ್ಲಿ ನಿಮ್ ಸ್ಥಾಪನೆಯಾಗಿದೆ. ಆದರೆ ಕಲಬುರಗಿಯನ್ನು ಸಂಪೂರ್ಣ ಕೈ ಬಿಡಲಾಗಿದೆ. ಇದನ್ನು ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನಿಸಬೇಕು.
ಅದೇ ರೀತಿ ಕಲಬುರಗಿಯ ವಿಮಾನ ನಿಲ್ದಾಣ ಉಡಾನ್ ಯೋಜನೆಗೆ ಸೇರ್ಪಡೆಯಾಗಲು, ವಿಭಾಗೀಯ ರೈಲ್ವೇ ಕಚೇರಿ ಕಾರ್ಯಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕುವುದು, ಇಎಸ್‌ಐ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪನೆಗೆ ಆಸಕ್ತಿ ತೋರುವುದು, ಕೆಎಂಎಫ್ ಮಾದರಿಯಲ್ಲಿ ತೊಗರಿ ಮಂಡಳಿ ಅಭಿವೃದ್ಧಿಪಡಿಸುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಆಸಕ್ತಿ ವಹಿಸಬೇಕೆಂದು ನಿಯೋಗದ ಮುಖಂಡರು ಆಗ್ರಹಿಸಿದರು.
ನಿಯೋಗದಲ್ಲಿ ಎಚ್‌ಕೆಸಿಸಿಐ ಪದಾಧಿಕಾರಿಗಳಾದ ಶರಣು ಪಪ್ಪಾ, ಶಿವರಾಜ ಇಂಗಿನಶೆಟ್ಟಿ, ಮನೀಶ ಎಂ. ಜಾಜಿ, ಅಣ್ಣಾರಾವ ಮಾಲಿಪಾಟೀಲ, ವೆಂಕಟ ಚಿಂತಾಮಣಿರಾವ್, ರಾಯಚೂರಿನ ರಜಾಕ್ ಉಸ್ತಾದ, ಬೀದರ್‌ನ ಬಿ.ಜಿ. ಶೆಟಕಾರ, ಮುಖಂಡರಾದ ಬಸವರಾಜ ಇಂಗಿನ್, ತಂತ್ರಜ್ಞರಾದ ಛಾಯಾ ದೇಗಾಂವಕರ್, ಬಸವರಾಜ ಕುಮೂರ, ಸಂಗೀತಾ ಕಟ್ಟಿ ಮುಂತಾದವರಿದ್ದರು
ಮೂರು ದಿನ ಕಲಬುರಗಿಯಲ್ಲಿರುವೆ 371ನೇ (ಜೆ) ವಿಧಿ ಪರಿಣಾಮಕಾರಿ ಜಾರಿ ಹಾಗೂ ಹೈ.ಕ ಭಾಗದ ಅಭಿವೃದ್ಧಿ ಕುರಿತು ಚರ್ಚಿಸಲು ಕಲಬುರಗಿಯಲ್ಲಿಯೇ ಮೂರು ದಿನ ಇದ್ದು ಪರಾಮರ್ಶಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಚಿವ ವೈಜನಾಥ ಪಾಟೀಲ ಹಾಗೂ ಎಚ್‌ಕೆಸಿಸಿಐ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು.