ಮಧುಗಿರಿ : ಗುಜರಾತಿನ ಅಮುಲ್ ಜೊತೆ ನಾಡಿನ ನಂದಿನಿ (ಕೆಎಂಎಫ್) ಸಂಸ್ಥೆಯನ್ನು ವಿಲೀನಗೊಳಿಸುವ ಪ್ರಕ್ರಿಯೆ ಶುರುವಾದಂತಿದ್ದು ಅದಕ್ಕೆ ಸರ್ಕಾರ ಸಮ್ಮತಿಸಿದರೆ ರೈತರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಪಟ್ಟಣದ ಶೀಥಲೀಕರಣ ಘಟಕದಲ್ಲಿ ಹೈನುಗಾರರಿಗೆ ಪರಿಹಾರದ ಚೆಕ್, ಹಸುಗಳಿಗೆ ಮೇವಿನ ಬೀಜ ಹಾಗೂ ರಬ್ಬರ್ ಮ್ಯಾಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಈಗಾಗಲೇ ಅಮುಲ್ ಸಂಸ್ಥೆಯು ಎನ್‍ಡಿಡಿಬಿ ಮೂಲಕ ನಮ್ಮ ಕೆಎಂಎಫ್ ನಿಂದ ಕೆಲವು ದಾಖಲೆಗಳನ್ನು ತರಿಸಿಕೊಂಡಿದ್ದು ಪರಿಶೀಲನೆಯಲ್ಲಿದೆ. ಅದರಲ್ಲಿ ಯಾವ ತಾಲೂಕಿನಲ್ಲಿ ಎಷ್ಟು ಡೈರಿಗಳಿವೆ, ಎಷ್ಟು ಜನ ಸದಸ್ಯರಿದ್ದಾರೆ ಹಾಗೂ ಎಷ್ಟು ಲೀಟರ್ ಹಾಲು ಸಂಗ್ರಹವಾಗುತ್ತದೆ.
ಅದರಲ್ಲಿ ಗುಣಮಟ್ಟದ ಹಾಲಿನ ಪ್ರಮಾಣವೆಷ್ಟು ಎಂಬ ಮಾಹಿತಿಯನ್ನು ಪಡೆದುಕೊಂಡಿದೆ. ಇದು ವಿಲೀನಕ್ಕೆ ಮುಂಚಿನ ಕೆಲಸಗಳಂತೆ ಕಾಣುತ್ತಿದ್ದು, ರೈತರು ಎಚ್ಚರಿಕೆಯಿಂದ ಇರಬೇಕು. ನಮ್ಮ ನಂದಿನಿ (ಕೆಎಂಎಫ್) ದೇಶದಲ್ಲಿ 2ನೇ ಸ್ಥಾನದಲ್ಲಿದ್ದು ಅಮುಲ್‍ಗೆ ಸರಿ ಸಮನಾಗಿ ಗ್ರಾಹಕರನ್ನು ಹೊಂದಿದೆ. ರಾಜ್ಯದಲ್ಲಿ ವ್ಯವಸಾಯ ಕೈಕೊಟ್ಟರೂ ಹೈನುಗಾರಿಕೆಯಿಂದ ಜನತೆ ಬದುಕುತ್ತಿದ್ದಾರೆ. ಒಂದು ವೇಳೆ ಕೆಎಂಎಫ್ (ನಂದಿನಿ) ಅಮುಲ್ ಜೊತೆ ವಿಲೀನವಾದರೆ ಬಹಳ ಸಂಕಷ್ಟವನ್ನು ನಮ್ಮ ರೈತರು ಎದುರಿಸಬೇಕಾಗುತ್ತದೆ. ಇಷ್ಟಕ್ಕೂ ನಮ್ಮ ನಂದಿನಿಗೆ ಎಲ್ಲಿಯೂ ಬೇಡಿಕೆ ತಗ್ಗಿಲ್ಲ. ಹೀಗಿರುವಾಗ ಯಾವ ಕಾರಣಕ್ಕೂ ವಿಲೀನದ ಕ್ರಮಕ್ಕೆ ಸರ್ಕಾರ ಸೊಪ್ಪು ಹಾಕಬಾರದು. ಇದು ನಡೆದರೆ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ಅದೇ ನಿಮಗೆ ಮುಳುವಾಗಲಿದ್ದು ವಿಲೀನದ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿಯಬೇಕು ಎಂದರು.
ಸಭೆಯಲ್ಲಿ ತಾವು ಅಧ್ಯಕ್ಷರಾದ ನಂತರ ಜಾರಿಯಾದ ರೈತ ಕಲ್ಯಾಣ ಟ್ರೆಸ್ಟ್ ನಿಂದ ಸಿಗುವ ಸೌಲಭ್ಯಗಳು ದೇಶದ ಯಾವುದೇ ಒಕ್ಕೂಟ ನೀಡಿಲ್ಲ. ಇಂದು ತುಮುಲ್ ರೈತರಿಂದ ಬಲಿಷ್ಟವಾಗಿದ್ದು ಸಂಸ್ಥೆಯ ಎಲ್ಲ ಸೌಲಭ್ಯ ಬಳಸಿಕೊಂಡು ನೀವೂ ಆರ್ಥಿಕವಾಗಿ ಸಧೃಡರಾಗಲು ಮನವಿ ಮಾಡಿದರು.
ಅಮುಲ್ ಜೊತೆ ಕೆಎಂಎಫ್ ವಿಲೀನದ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದಂತಿದೆ, ಈ ಕುರಿತು ಕೆಲವು ದಾಖಲೆಗಳನ್ನು ಎನ್‍ಡಿಡಿಬಿ ಪಡೆದುಕೊಂಡಿದ್ದು ಸರ್ಕಾರ ಎಚ್ಚೆತ್ತುಕೊಂಡು ರೈತರ ಹಿತ ಕಾಯಬೇಕು. ಮೈ ಮರೆತರೆ ಎಲ್ಲರೂ ಒಟ್ಟಾಗಿ ಹೋರಾಟಕ್ಕೆ ಧುಮುಕಬೇಕಾಗುತ್ತದೆ.
– ಕೆಸಿಆರ್, ಮಾಜಿ ತುಮುಲ್ ಅಧ್ಯಕ್ಷ, ಹಾಲಿ ಸದಸ್ಯ.
ಕಾರ್ಯಕ್ರಮದಲ್ಲಿ ತುಮುಲ್ ತಾಲೂಕು ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ಧರ್ಮವೀರ, ದರ್ಶನ್, ಮಾರೇಗೌಡ, ಮಹಾಲಕ್ಷ್ಮೀ, ಪಶುವೈದ್ಯ ಡಾ.ದೀಕ್ಷಿತ್ ಹಾಗೂ ಹಾಲು ಉತ್ಪಾದಕರು, ಡೇರಿ ಸಿಬ್ಬಂದಿಗಳು ಇದ್ದರು.