Advertisement

ಕೆ.ಎಂ. ನಟರಾಜ್‌ ಸುಪ್ರೀಂಕೋರ್ಟ್‌ ಹೆಚ್ಚುವರಿ ಸಾಲಿಸಿಟರ್‌ ಜನರಲ್‌

02:52 AM Jan 16, 2019 | |

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎಂ. ನಟರಾಜ್‌ ಅವರನ್ನು ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಕೇಂದ್ರ ಸರ್ಕಾರ ನೇಮಿಸಿದೆ. ಈ ಸಂಬಂಧ ಜ.14ರಂದು ಕೇಂದ್ರ ಕಾನೂ ನು ಸಚಿವಾಲಯ ಆದೇಶ ಹೊರಡಿಸಿದ್ದು, ಅದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದೆ.

Advertisement

ಈ ಮೂಲಕ ಸುಮಾರು 28 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನ ರಲ್‌ ಹುದ್ದೆ ಕರ್ನಾ ಟಕದವರಿಗೆ ಸಿಕ್ಕಿದೆ. ಈ ಹಿಂದೆ ನಿವೃತ್ತ ಲೋಕಾಯುಕ್ತ ನ್ಯಾ. ಎನ್‌. ಸಂತೋಷ್‌ ಹೆಗ್ಡೆ 1989-90ರಲ್ಲಿ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು. ಆದರ ಬಳಿಕ ಕೆ.ಎಂ. ನಟರಾಜ್‌ ಅವರು ಈ ಹುದ್ದೆಗೆ ನೇಮಕ ಗೊಂಡಿದ್ದಾರೆ. 2020ರ ಜೂನ್‌ 30ರವರೆಗೆ ಈ ಹುದ್ದೆಯಲ್ಲಿರಲಿದ್ದಾರೆ.

ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಇದೀಗ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹುದ್ದೆಗೆ ನೇಮಕ ಮಾಡಿದೆ. 2015ರ ಏ.8ರಂದು ನಟರಾಜ್‌ ಅವರು ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಕೆ.ಎಂ. ನಟರಾಜ್‌ ಮಂಗಳೂರಿನ ಪ್ರತಿಷ್ಠಿತ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಪದವಿ ಪಡೆದು 1992ರಲ್ಲಿ ಮಾಜಿ ಅಡ್ವೋಕೇಟ್ ಜನರಲ್‌ ಬಿ.ವಿ. ಆಚಾರ್ಯ ಬಳಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ 1995ರಲ್ಲಿ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ಪ್ರಾರಂಭಿಸಿದರು. 2009ರಿಂದ 2013ರವರೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್‌ ಆಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಇವರು ಹೈಕೋರ್ಟ್‌ನ ಹಿರಿಯ ವಕೀಲರಾಗಿ ನಿಯುಕ್ತಿಗೊಂಡಿದ್ದರು. ನೇಮಕ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ನಟರಾಜ್‌ ‘ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next