ಬೆಳಗಾವಿ: ಕೆಎಲ್‍ಇ ಸಂಸ್ಥೆ ದಾನಿಗಳಿಂದ ಬೆಳೆದಿದೆ, ಕಾಂಗ್ರೆಸ್‍ನಿಂದ ಅಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿರುಗೇಟು ನೀಡಿದರು.
108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‍ಇ ಸಂಸ್ಥೆಯು ದಾನಿಗಳಿಂದ ಬೆಳೆದು ನಿಂತಿದೆ. ಕೆಎಲ್‍ಇ ಸಂಸ್ಥೆಯ ಯಾವುದೇ ಇತಿಹಾಸವನ್ನು ಅರಿಯದೆ ಬಾಲಿಶವಾದ ಹೇಳಿಕೆಗಳನ್ನು ಕೊಡುವುದು ಉಚಿತವಾದುದಲ್ಲ ಎಂದಿದ್ದಾರೆ.
ಕೆಎಲ್‍ಇ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ ಪರ ಪ್ರಚಾರ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂ.ಗೆ ಜಮೀನು ನೀಡಿದ ಫಲವೇ ಕೆಎಲ್‍ಇ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಬೆಳೆದಿದೆ ಎಂದು ಹೇಳಿದ್ದರು.
ಆಯಾ ಕಾಲಘಟ್ಟದಲ್ಲಿದ್ದ ಪಕ್ಷಗಳಿಂದ ಸಹಾಯ ಸಹಕಾರ ಪಡೆದಿದೆ. ಆದರೆ ಕೇವಲ ಕಾಂಗ್ರೆಸ್‍ನಿಂದ ಕೆಎಲ್‍ಇ ತನ್ನ ಆಸ್ಪತ್ರೆ ನಿರ್ಮಿಸಿದೆ, ವಿ.ವಿ.ಗಳನ್ನು ಸ್ಥಾಪಿಸಿದೆ ಎಂಬ ಹೇಳಿಕೆ ದುರದೃಷ್ಟಕರ ಎಂದರು.
ಕೆಎಲ್‍ಇ ಸಂಸ್ಥೆಯ ಇತಿಹಾಸವನ್ನು ತಿಳಿದುಕೊಳ್ಳದೆ ಮತಬೇಟೆಗಾಗಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಭಾವನೆಗಳೊಂದಿಗೆ ಆಟವಾಡುವುದು ಕಾಂಗ್ರೆಸ್‍ಗೆ ತರವಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಕೋರಬೇಕು ಎಂದು ಡಾ.ಪ್ರಭಾಕರ ಕೋರೆ ಆಗ್ರಹಿಸಿದ್ದಾರೆ.