ಹುಬ್ಬಳ್ಳಿ: ಕೆಎಲ್‌ಇ ತಾಂತ್ರಿಕ ವಿವಿವಿಯ ತಂತ್ರಜ್ಞಾನ ಅನ್ವೇಷಣೆ ಮತ್ತು ಉದ್ಯಮಶೀಲತೆ ಕೇಂದ್ರ(ಸಿಟಿಐಇ)ದೇಶಕ್ಕೆ ಮಾದರಿಯಾಗಿದೆ. ದೇಶದ ವಿವಿಧ ರಾಜ್ಯಗಳವರು ಕೇಂದ್ರ ವೀಕ್ಷಣೆಗೆ ಆಗಮಿಸಿದ್ದಲ್ಲದೆ, ಇದೇ ಮಾದರಿಯ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಶ ಶೆಟ್ಟರ ಹೇಳಿದರು.
ಸಿಟಿಐಇ ಆಯೋಜಿಸಿದ್ದ ಉದ್ಯಮಶೀಲತೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಿಟಿಐಇ ಕಾರ್ಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಮೆಚ್ಚುಗೆ ವ್ಯಕ್ತಪಡಿಸಿವೆಯಲ್ಲದೆ, ಕೆಲ ಪ್ರೊಜೆಕ್ಟ್ಗಳನ್ನು ಕೇಂದ್ರಕ್ಕೆ ನೀಡಿವೆ ಎಂದರು.
ಸಿಟಿಐಇ ಆರಂಭಕ್ಕೆ ದೊರೆತ ಪ್ರೇರಣೆ, ಅದು ನಡೆದು ಬಂದ ದಾರಿ ಕುರಿತು ವಿವರಿಸಿದ ಅವರು ಪ್ರಸ್ತುತ ಸಿಟಿಐಇ 38 ನವೋದ್ಯಮಿಗಳಿಗೆ ಆಶ್ರಯ ಕಲ್ಪಿಸಿದ್ದು, ಸುಮಾರು 500-1000 ವಿದ್ಯಾರ್ಥಿಗಳು ಉದ್ಯಮ ಕನಸಿನೊಂದಿಗೆ ಸಾಗಿದ್ದಾರೆ ಎಂದರು. ಆರಂಭದಲ್ಲಿ ಬೇರೆ ಬೇರೆ ಕಡೆಯ ಉದ್ಯಮಿಗಳನ್ನು ಕರೆ ತಂದು ಇಲ್ಲಿ ಉದ್ಯಮ ಆರಂಭಕ್ಕೆ ಸೌಲಭ್ಯ ಕಲ್ಪಿಸಿದ್ದೆವು. ಸೆಮಿ ಕಂಡೆಕ್ಟರ್, ನವ್ಯಾ ಬಯೋಟೆಕ್ನಾಲಜಿಯಂತಹ ಕಂಪೆನಿಗಳು ಇಲ್ಲಿ ಆರಂಭಗೊಂಡಿದ್ದು, ಇದೀಗ ಸುಮಾರು 100 ಕೋಟಿ ರೂ. ವಹಿವಾಟು ನಡೆಸುತ್ತಿವೆ.
ಉದ್ಯಮಿಗಳ ಅನುಭವ ಸಾರವನ್ನು ಉದ್ಯಮಾಸಕ್ತ ನಮ್ಮ ವಿದ್ಯಾರ್ಥಿಗಳಿಗೆ ವರ್ಗಾಯಿಸುವುದು ನಮ್ಮ ಉದ್ದೇಶವಾಗಿತ್ತು. ಅದರಂತೆಯೇವಿದ್ಯಾರ್ಥಿಗಳ ಉದ್ಯಮ ಚಿಂತನೆಗೆ ಉತ್ತೇಜನಕ್ಕಾಗಿ ಸಿಟಿಐಇ ಆರಂಭಿಸಿದೆವು ಎಂದರು. ಸಿಟಿಐಇ ಕೇಂದ್ರಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 30 ಕಾಲೇಜಿನವರು ಭೇಟಿ ನೀಡಿದ್ದಾರೆ. ನಾಂದೇಡ ಸೇರಿದಂತೆ ನಾಲ್ಕು ಕ್ಯಾಂಪಸ್‌ಗಳಲ್ಲಿ ನಮ್ಮ ಮಾದರಿಯನ್ನು ಅನುಷ್ಠಾನಗೊಳಿಸಲಾಗಿದೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
5ಕೋಟಿ ರೂ.ಪ್ರೊಜೆಕ್ಟ್: ಸಿಟಿಐಇ ಆರಂಭವಾಗಿ ಐದು ವರ್ಷ ಕಳೆದರೂ ನಾವು ಸರಕಾರದಿಂದ ಒಂದು ರೂಪಾಯಿ ಅನುದಾನಪಡೆದಿರಲಿಲ್ಲ. ಉದ್ಯಮಶೀಲತೆ ಉತ್ತೇಜನಕ್ಕಾಗಿ ಸುಮಾರು 20ಸಾವಿರ ಚದರ ಅಡಿ ಕಟ್ಟಡ, ಸುಮಾರು 38 ನವೋದ್ಯಮಿಗಳಿಗೆ ಅವಕಾಶ ಕಂಡು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ವರ್ಷ ಸುಮಾರು 5ಕೋಟಿ ರೂ.ಗಳ ಪ್ರೊಜೆಕ್ಟ್‌ನು° ಕೇಂದ್ರಕ್ಕೆ ನೀಡಿದೆ.
ಅದೇ ರೀತಿ ಕೇಂದ್ರ ಟಿವಿಐಗೆ ಆಯ್ಕೆಗೊಂಡಿದ್ದು, ಕೇಂದ್ರ ಸರಕಾರ 1ಕೋಟಿ ರೂ.ಗಳ ಬೀಜ ಬಂಡವಾಳ ನೀಡಿದೆ ಎಂದರು. ನವೋದ್ಯಮಿಗಳ ಉತ್ಪನ್ನಗಳ ಸಂಶೋಧನೆ, ಅನ್ವೇಷಣೆ, ಪ್ರಯೋಗಕ್ಕೆ ಸಿಟಿಐಇಯಿಂದ ಸುಮಾರು 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಲರ್ನಿಂಗ್ ಫ್ಯಾಕ್ಟರಿ ರೂಪಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ.
ಭವಿಷ್ಯದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದಕ್ಕಾಗಿ ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಒಟ್ಟಾರೆಯಾಗಿ ಉದ್ಯಮಸ್ನೇಹಿ ವಾತಾವರಣಕ್ಕೆ ಮುಂದಾಗಿದ್ದೇವೆ ಎಂದರು. ಸಿಟಿಐಇ ನಿರ್ದೇಶಕ ಪ್ರೊ| ನಿತಿನ್ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನೂರಾರು ಉದ್ಯಮಾಸಕ್ತ ವಿದ್ಯಾರ್ಥಿಗಳು, ನವೋದ್ಯಮಿಗಳು ಪಾಲ್ಗೊಂಡಿದ್ದರು.