ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಫ್ರೀಡಂ ಕಪ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರು ಶತಕ ಬಾರಿಸಿ ಮಿಂಚಿದ್ದಾರೆ. ಮತ್ತೋರ್ವ ಕನ್ನಡಿಗೆ ಮಯಾಂಕ್ ಅಗರ್ವಾಲ್ ಜೊತೆಗೆ ಆರಂಭಿಕ ವಿಕೆಟ್ ಗೆ ಶತಕದ ಜೊತೆಯಾಟವಾಡಿದ ಕೆ ಎಲ್ ರಾಹುಲ್ ಭಾರತ ಮೊದಲ ದಿನದಲ್ಲಿ ಮೇಲುಗೈ ಸಾಧಿಸುವಂತೆ ಮಾಡಿದರು.
122 ರನ್ ಗಳಿಸಿರುವ ರಾಹುಲ್ ಅಜೇಯರಾಗಿದ್ದಾರೆ. ಒಟ್ಟು 248 ಎಸೆತ ಗಳನ್ನು ನಿಭಾಯಿಸಿರುವ ರಾಹುಲ್ 16 ಬೌಂಡರಿ, ಒಂದು ಸಿಕ್ಸರ್ ಕೂಡ ಸಿಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ ರಾಹುಲ್ ಏಷ್ಯಾದಿಂದ ಹೊರಗಡೆ ಐದು ಶತಕ ಗಳಿಸಿದ್ದಾರೆ. ಈ ಮೂಲಕ ಸೆಹವಾಗ್ ಅವರ ದಾಖಲೆಯನ್ನು ರಾಹುಲ್ ಮುರಿದರು. ಆರಂಭಿಕನಾಗಿ ಏಷ್ಯಾದಿಂದ ಹೊರಕ್ಕೆ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸುನೀಲ್ ಗಾವಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. (15 ಶತಕ). ವೀರೆಂದ್ರ ಸೆಹವಾಗ್ ನಾಲ್ಕು ಶತಕ ಬಾರಿಸಿದ್ದರು.
ಇದನ್ನೂ ಓದಿ:ಯುಎಸ್ ಎ ಕ್ರಿಕೆಟ್ ನತ್ತ ಮುಖಮಾಡಿದ ಭಾರತದ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್
7 ವರ್ಷಗಳ ಹಿಂದೆ ಬಾಕ್ಸಿಂಗ್ ದಿನದಂದೇ ಮೆಲ್ಬರ್ನ್ ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ರಾಹುಲ್ ಬಾಕ್ಸಿಂಗ್ ಡೇಯಂದೇ 7ನೇ ಟೆಸ್ಟ್ ಶತಕ ಬಾರಿಸಿ ಮೆರೆದದ್ದು ವಿಶೇಷವಾಗಿತ್ತು. ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಕೇವಲ 2ನೇ ಓಪನರ್. ವಾಸಿಮ್ ಜಾಫರ್ ಮೊದಲಿಗ. ಅವರು 2006-07ರ ಕೇಪ್‌ಟೌನ್ ಟೆಸ್ಟ್‌ನಲ್ಲಿ 116 ರನ್ ಬಾರಿಸಿದ್ದರು. ಇದೀಗ ರಾಹುಲ್ ಈ ಮೊತ್ತ ವನ್ನು ಹಿಂದಿಕ್ಕಿದ್ದಾರೆ.
ರಾಹುಲ್ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ ಕೇವಲ 3ನೇ ವಿದೇಶಿ ಓಪನರ್ ಕೂಡ ಹೌದು. ಸಯೀದ್ ಅನ್ವರ್ ಮತ್ತು ಕ್ರಿಸ್ ಗೇಲ್ ಉಳಿದಿಬ್ಬರು.