ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ನಂ.3 ಬ್ಯಾಟರ್ ಚೇತೇಶ್ವರ್ ಪೂಜಾರ ಹೇಳಿಕೆಯೊಂದನ್ನು ನೀಡಿದ್ದು, ಕೆ.ಎಲ್. ರಾಹುಲ್ ಅವರನ್ನು ಆರಂಭಿಕನಾಗಿಯೇ ಮುಂದುವರಿಸಬೇಕು, ರೋಹಿತ್ 3ನೇ ಕ್ರಮಾಂಕದಲ್ಲಿ ಆಡಬೇಕು ಎಂದಿದ್ದಾರೆ.
“ಕೆಲವು ಕಾರಣಗಳಿಂದ ನಾವು ಕೆಲವೊಂದು ಬ್ಯಾಟಿಂಗ್ ಸರದಿಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ರಾಹುಲ್-ಜೈಸ್ವಾಲ್ ಓಪನಿಂಗ್ ಕಾಂಬಿನೇಶನ್ ಕೂಡ ಇದರಲ್ಲೊಂದು. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ರೋಹಿತ್ 3ನೇ, ಗಿಲ್ 5ನೇ ಕ್ರಮಾಂಕದಲ್ಲಿ ಆಡುವುದು ಒಳ್ಳೆಯದು’ ಎಂದರು.
“ರೋಹಿತ್ ಮರಳಿ ಇನ್ನಿಂಗ್ಸ್ ಆರಂಭಿಸುವುದಾದರೆ ಆಗ ರಾಹುಲ್ 3ನೇ ಕ್ರಮಾಂಕಕ್ಕೆ ಬರಬೇಕಾಗುತ್ತದೆ. ಇದರಲ್ಲಿ ಅಂತಹ ವ್ಯತ್ಯಾಸವೇ ನಿಲ್ಲ. ಆದರೆ ನನ್ನ ಪ್ರಕಾರ ರಾಹುಲ್ ಓಪನಿಂಗ್ ಬರುವುದೇ ಸೂಕ್ತ. ಅವರು ಈ ಸ್ಥಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಈ ವಿಷಯದಲ್ಲಿ ಚೆಲ್ಲಾಟವಾಡಬಾರದು’ ಎಂಬುದಾಗಿ ಪೂಜಾರ ಹೇಳಿದರು.
ಪರ್ತ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಾಹುಲ್-ಜೈಸ್ವಾಲ್ 63 ಓವರ್ ನಿಭಾಯಿಸಿ ದ್ವಿಶತಕದ ಜತೆಯಾಟ ನಡೆಸಿದ್ದರು. ಇದರಿಂದ ಭಾರತಕ್ಕೆ ಭಾರೀ ಮೇಲುಗೈ ಲಭಿಸಿತ್ತು. ಜೈಸ್ವಾಲ್ 161, ರಾಹುಲ್ 77 ರನ್ ಹೊಡೆದಿದ್ದರು.
ಶುಭಮನ್ ಗಿಲ್ ಗೈರಲ್ಲಿ ದೇವದತ್ತ ಪಡಿಕ್ಕಲ್ ವನ್‌ಡೌನ್‌ನಲ್ಲಿ ಆಡಲಿಳಿದಿದ್ದರು. ಅಡಿಲೇಡ್‌ನಲ್ಲಿ ಪಡಿಕ್ಕಲ್ ಮತ್ತು ಜುರೆಲ್ ಆಡುವ ಯಾವುದೇ ಸಾಧ್ಯತೆ ಇಲ್ಲ.
ಅಂದಹಾಗೆ, ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ರೋಹಿತ್ ಜತೆ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದರು. ಪೂಜಾರ ವನ್‌ಡೌನ್‌ನಲ್ಲಿ, ರಹಾನೆ, ಅಗರ್ವಾಲ್, ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು.