ರಾಜ್‌ಕೋಟ್: ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಕೆ. ಎಲ್. ರಾಹುಲ್ ಅವರು ತೊಡೆಗಳ ಸ್ನಾಯುಗಳ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲವಾದ ಕಾರಣ ಮೂರನೇ ಪಂದ್ಯದಿಂದಲೂ ಹೊರಬಿದ್ದಿದ್ದಾರೆ ಎಂದು ಸೋಮವಾರ ತಿಳಿದು ಬಂದಿದೆ.
ಪ್ರಥಮ ದರ್ಜೆಯಲ್ಲಿ ಶ್ರೇಷ್ಠ ನಿರ್ವಹಣೆ ತೋರುತ್ತಿರುವ ಕರ್ನಾಟಕದ ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್ ಮ್ಯಾನ್ ದೇವದತ್ ಪಡಿಕ್ಕಲ್ ಅವರು ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
“ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡವು ಇನ್ನೂ ವಿಶ್ವಾಸ ಹೊಂದಿಲ್ಲ” ಎಂದು ಬಿಸಿಸಿಐನ ಹಿರಿಯ ಮೂಲವು ಪಿಟಿಐಗೆ ತಿಳಿಸಿದೆ.ಬಿಸಿಸಿಐನ ವೈದ್ಯಕೀಯ ತಂಡದ ಅನುಮತಿಗೆ ಒಳಪಟ್ಟು ಆಯ್ಕೆದಾರರು ಈ ಹಿಂದೆ ರಾಹುಲ್ ಮತ್ತು ರವೀಂದ್ರ ಜಡೇಜಾ ಇಬ್ಬರನ್ನೂ ತಂಡದಲ್ಲಿ ಹೆಸರಿಸಿದ್ದರು.
ಇತ್ತೀಚಿನ ರಣಜಿ ಟ್ರೋಫಿ ಪಂದ್ಯದಲ್ಲಿ, 23 ವರ್ಷದ ಪಡಿಕ್ಕಲ್ 151 ರನ್ ಗಳಿಸಿದ್ದರು, ಪಂದ್ಯವನ್ನು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಸ್ಟ್ಯಾಂಡ್‌ನಿಂದ ಆಟವನ್ನು ವೀಕ್ಷಿಸಿ ಸಂಭ್ರಮಿಸಿದ್ದರು.
ಪಡಿಕ್ಕಲ್ ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ರಣಜಿ ಆರಂಭಿಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 193 ರನ್ ಗಳಿಸಿದ್ದರು. ಗೋವಾ ವಿರುದ್ಧ 103 ರನ್ ಸಾಹಸದ ಜೊತೆಗೆ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅನಧಿಕೃತ ಟೆಸ್ಟ್‌ಗಳಲ್ಲಿ ಭಾರತ ಎ ಪರ ತನ್ನ ಮೂರು ಇನ್ನಿಂಗ್ಸ್‌ಗಳಲ್ಲಿ 105, 65 ಮತ್ತು 21 ರನ್ ಗಳಿಸಿದ್ದರು.