ಬೆಂಗಳೂರು: “ನಾನೊಂದು ಘೋಷಣೆ ಮಾಡಲಿದ್ದೇನೆ, ಕಾಯುತ್ತಿರಿ’ ಎಂದು ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಮಾಡಿದ್ದ ಇನ್ಸ್ಟಾಗ್ರಾಮ್ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವೇಳೆ ಕೆಎಲ್ ರಾಹುಲ್ ಅವರು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಬಗ್ಗೆ ಸುದ್ದಿಯೊಂದು ವೈರಲ್ ಆಗಿತ್ತು. ಈ ಬಗ್ಗೆ ಫೇಕ್ ಪೋಸ್ಟ್ ಒಂದು ಇಂಟರ್ನೆಟ್ ನಲ್ಲಿ ಭಾರೀ ಹರಿದಾಡಿತ್ತು.
ಇದಕ್ಕೆ ರಾಹುಲ್ ಸ್ಪಷ್ಟನೆ ನೀಡಿದ್ದಾರೆ. ಪತ್ನಿ ಅತಿಯಾ ಶೆಟ್ಟಿ ಜೊತೆಗೂಡಿ, ಕ್ರಿಕೆಟ್ ಸಾಮಾಗ್ರಿಗಳನ್ನು ಹರಾಜಿಗಿಟ್ಟು, ವಿಶೇಷ ಮಕ್ಕಳಿಗಾಗಿ ತಾವು 1.93 ಕೋಟಿ ರೂ. ಸಂಗ್ರಹಿಸಿರುವುದಾಗಿ ಅವರು ಶುಕ್ರವಾರ ತಿಳಿಸಿದ್ದಾರೆ.
ಈ ಬಗ್ಗೆ ಮತ್ತೂಂದು ಪೋಸ್ಟ್ ಹಂಚಿಕೊಂಡಿರುವ ರಾಹುಲ್, ನಮ್ಮ ಹರಾಜು ಯಶಸ್ವಿಯಾಗಿದೆ. ಈ ಮೂಲಕ ನಾವು ಹಲವಾರು ವಿಶೇಷ ಮಕ್ಕಳಿಗೆ ನೆರವು ನೀಡುವ ಗುರಿಯನ್ನಿಟ್ಟುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿ ಜೆರ್ಸಿಗೆ 40 ಲಕ್ಷ ರೂ.: ರಾಹುಲ್-ಅತಿಯಾ ನಡೆಸಿದ ಹರಾಜಿನಲ್ಲಿ ವಿರಾಟ್ ಕೊಹ್ಲಿಯ ಜೆರ್ಸಿ 40 ಲಕ್ಷ ರೂ.ಗೆ ಮಾರಾಟವಾಗಿದೆ. ಉಳಿದಂತೆ ದುಬಾರಿ ಬೆಲೆಗೆ ಹರಾಜಾದ ವಸ್ತುಗಳೆಂದರೆ ಕೊಹ್ಲಿಯ ಗ್ಲೌಸ್ (28 ಲಕ್ಷ), ರೋಹಿತ್ ಶರ್ಮಾರ ಕ್ರಿಕೆಟ್ ಬ್ಯಾಟ್ (24 ಲಕ್ಷ), ಧೋನಿಯ ಬ್ಯಾಟ್ (13 ಲಕ್ಷ), ರಾಹುಲ್ ದ್ರಾವಿಡ್‌ರ ಬ್ಯಾಟ್ (11 ಲಕ್ಷ).
ಕೆಎಲ್ ರಾಹುಲ್ ಅವರು ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿರಲಿಲ್ಲ. ಅವರು ಕಳೆದ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದರು.
ಮುಂದೆ ಅವರು ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ಅವರು ಶುಭಮನ್ ಗಿಲ್ ಅವರ ನಾಯಕತ್ವದಡಿಯಲ್ಲಿ ಇಂಡಿಯಾ ಎ ತಂಡದಲ್ಲಿ ಆಡಲಿದ್ದಾರೆ.