ಹರಾರೆ: ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿ ನಾಯಕ ಕೆ.ಎಲ್.ರಾಹುಲ್ ಅವರು ಬೌಲರ್ ಗಳಿಗೆ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸ್ವಾತಂತ್ರ್ಯವನ್ನು ನೀಡಿದ್ದಾರೆ ಮತ್ತು ತಂಡದ ವಾತಾವರಣ ಅದ್ಭುತವಾಗಿದೆ ಎಂದು ವೇಗಿ ಮೊಹಮ್ಮದ್ ಸಿರಾಜ್ ಹೇಳಿದರು.
“ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್‌ನಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಮೊದಲ ಪಂದ್ಯದಲ್ಲೂ ನನ್ನ ಲಯ ಚೆನ್ನಾಗಿತ್ತು, ಆದ್ದರಿಂದ ನಾನು ವಿಕೆಟ್ ಪಡೆಯುತ್ತೇನೋ ಇಲ್ಲವೋ ಎಂದು ಚಿಂತಿಸದೆ ಸ್ಥಿರವಾಗಿ ಬಾಲ್ ಹಾಕುವುದು ಯೋಜನೆಯಾಗಿದೆ” ಎಂದು ಸಿರಾಜ್ ಪಂದ್ಯದ ಬಳಿಕ ಹೇಳಿದರು.
ಎರಡನೇ ಏಕದಿನ ಪಂದ್ಯದಲ್ಲಿ ಎಂಟು ಓವರ್ ಬಾಲ್ ಹಾಕಿದ್ದ ಸಿರಾಜ್ ಕೇವಲ 16 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು.
ಇದನ್ನೂ ಓದಿ:ನಾಲ್ಕು ಸಿನಿಮಾ-ವಿಭಿನ್ನ ಪಾತ್ರ: ರೈಸಿಂಗ್ ಪ್ರಮೋದ್
“ನಾವು ಸರಣಿಯನ್ನು ಗೆದ್ದಿದ್ದೇವೆ. ತಂಡದ ವಾತಾವರಣವು ತುಂಬಾ ಚೆನ್ನಾಗಿದೆ. ಕೆಎಲ್ ಭಾಯ್ (ರಾಹುಲ್) ಬೌಲರ್‌ಗಳಿಗೆ ಸಾಕಷ್ಟು ಅವಕಾಶ ನೀಡುತ್ತಾರೆ, ಆದ್ದರಿಂದ ವಾತಾವರಣವು ತುಂಬಾ ಉತ್ತಮವಾಗಿದೆ. ನಾನು ನನ್ನ ಬೌಲಿಂಗ್ ಪ್ರಕ್ರಿಯೆಯನ್ನು ತುಂಬಾ ಆನಂದಿಸುತ್ತಿದ್ದೇನೆ. ನನಗೆ ಮೊದಲಿನಿಂದಲೂ ಔಟ್‌ಸ್ವಿಂಗ್ ಹಾಕುತ್ತಿದ್ದೆ, ಆದರೆ ನನಗೆ ಅದರ ಬಗ್ಗೆ ಹೆಚ್ಚು ವಿಶ್ವಾಸವಿರಲಿಲ್ಲ.ಈಗ ನಾನು ಸೀಮ್ ನಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ, ಆತ್ಮವಿಶ್ವಾಸವೂ ಹೆಚ್ಚಿದೆ ” ಎಂದು ಸಿರಾಜ್ ಹೇಳಿದರು.
ಗೆಲುವಿಗೆ 162 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 24.2 ಓವರ್‌ಗಳು ಬಾಕಿ ಇರುವಂತೆಯೇ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಸರಣಿಯ ಅಂತಿಮ ಪಂದ್ಯ ಸೋಮವಾರ ನಡೆಯಲಿದೆ.