ನಾಟಿಂಗ್‌ಹ್ಯಾಮ್: ಎರಡು ವರ್ಷಗಳ ಬಳಿಕ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಸಂತಸದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಅವರು ಭಾರತದ ಇನ್ನಿಂಗ್ಸ್ ಆರಂಭಿಸಿ ಕ್ರಮವಾಗಿ 84 ಹಾಗೂ 26 ರನ್ ಗಳಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ಪಂದ್ಯದ ಬಳಿಕ ಮಾತನಾಡಿದ ರಾಹುಲ್, “ಸುದೀರ್ಘ ಅವಧಿಯ ಬಳಿಕ ಭಾರತ ತಂಡದ ಪರ ಬಿಳಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಕಳೆದ 2 ಅಥವಾ 3 ಸರಣಿಗಳಿಂದ ನಾನು ಬೆಂಚ್ ಕಾದಿದ್ದೇನೆ. ತಂಡ ಕೂಡ ಅತ್ಯುತ್ತಮ ಪ್ರದರ್ಶನ ತೋರುತ್ತಿತ್ತು. ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳನ್ನು ಟೀಮ್ ಇಂಡಿಯಾ ಸೋಲಿಸುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿತ್ತು. ತಂಡದ ಜತೆ ಇರುವುದಕ್ಕೆ ಹೆಮ್ಮೆ ಕೂಡ ಆಗುತ್ತಿತ್ತು. ಆದರೆ ಇದೇ ವೇಳೆ ಆಡುವ ಬಳಗದಲ್ಲಿ ಅವಕಾಶ ಸಿಗದ್ದಕ್ಕೆ ಬೇಸರವೂ ಆಗುತ್ತಿತ್ತು’ ಎಂದು ರಾಹುಲ್ ಹೇಳಿದರು.
ಅವಕಾಶಕ್ಕೆ ಕಾಯಬೇಕು:
“ಆಡುವ ಬಳಗದಲ್ಲಿ ಅವಕಾಶ ಪಡೆಯದೇ ಇದ್ದಾಗ ಅಭ್ಯಾಸ ಮಾಡುತ್ತಿದ್ದೆ. ತಂಡದಲ್ಲಿದ್ದಾಗ ಸವಾಲುಗಳನ್ನು ಎದುರಿಸಬೇಕು ಹಾಗೂ ಅವಕಾಶ ಸಿಗುವ ವರೆಗೂ ಕಾಯಬೇಕಾಗುತ್ತದೆ. ಇಂಗ್ಲೆಂಡ್‌ನಲ್ಲಿ ಅವಕಾಶ ಸಿಕ್ಕಿರುವುದಕ್ಕೆ ತುಂಬ ಸಂತೋಷವಾಗಿದೆ. ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಖುಷಿಯೂ ನನಗಿದೆ. ಆದರೆ ಮಳೆಯಿಂದಾಗಿ ಗೆಲ್ಲುವ ಅವಕಾಶ ಕೈತಪ್ಪಿದ್ದು ಬೇಸರ ತಂದಿದೆ’ ಎಂದರು.