ರಾಯಚೂರು: ಪ್ರತಿ ವರ್ಷ ಸರ್ಕಾರ ನೀಡುತ್ತಿದ್ದ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಬಾರಿ ಹೊಸ ಕೆಲಸಗಳೇ ಇಲ್ಲದಾಗಿವೆ. ಲಾಕ್‌ಡೌನ್‌ನಿಂದ ಸರ್ಕಾರ ಈ ಬಾರಿ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡದ ಕಾರಣ ಹಳೆ ಕೆಲಸಗಳನ್ನೇ ಮುಗಿಸುವುದು ಪ್ರಸಕ್ತ ವರ್ಷದ ಗುರಿಯಾಗಿದೆ.
ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ಸ್ಥಾಪಿಸಲಾಗಿದೆ. ಅದಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ 1500 ಕೋಟಿ ರೂ. ಮೀಸಲಿಡಲಾಗುತ್ತಿದೆ. ಆದರೆ, ಸರ್ಕಾರ ನೀಡುವ ಹಣ ಈ ವರೆಗೂ ಶೇ.100 ಖರ್ಚಾದ ನಿದರ್ಶನಗಳೇ ಇಲ್ಲ. 2020-21ನೇ ಸಾಲಿನಲ್ಲಿ ಕೋವಿಡ್-19 ಕಾರಣಕ್ಕೆ ಲಾಕ್ ಡೌನ್ ಜಾರಿಯಾದ ಪರಿಣಾಮ ಸರ್ಕಾರ ಅಭಿವೃದ್ಧಿಗೆ ಕಡಿವಾಣ ಹಾಕಿದ್ದು, ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಸಿಸಿ ರಸ್ತೆ, ಶಾಲಾಭಿವೃದ್ಧಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಮಂಡಳಿಯಿಂದ ಅನುದಾನ ನೀಡಲಾಗುತ್ತಿದೆ. ಆದರೂ ಜನಪ್ರತಿನಿಧಿ ಗಳ ಇಚ್ಛಾಶಕ್ತಿ ಕೊರತೆಯಿಂದ ಅನುದಾನ ಶೇ.100 ಖರ್ಚಾಗದೆ ಉಳಿಯತ್ತಿದೆ. 2019-20ನೇ ಸಾಲಿನಲ್ಲೂ ಆರಂಭಗೊಳ್ಳದೆ ಉಳಿದಿದ್ದ 1270 ಕಾಮಗಾರಿಗಳಿಗೆ ಈಗ ಚಾಲನೆ ನೀಡಲಾಗಿದೆ. ಈಗಾಗಲೇ ಆರ್ಥಿಕ ವರ್ಷ ಶುರುವಾಗಿ ಏಳು ತಿಂಗಳು ಕಳೆದಿದ್ದು, ಸರ್ಕಾರ ನಿರೀಕ್ಷಿತ ಅನುದಾನ ನೀಡುವುದೇ ಎನ್ನುವ ಶಂಕೆ ಮೂಡಿದೆ.
ಕ್ರಿಯಾಯೋಜನೆ ಸಲ್ಲಿಕೆ: ಜಿಲ್ಲಾಡಳಿತ ಪ್ರತಿ ವರ್ಷದಂತೆ ಸರ್ಕಾರಕ್ಕೆ ಈ ವರ್ಷವೂ ಕಾಮಗಾರಿಗಳ ಅಂದಾಜುಪಟ್ಟಿ ಸಲ್ಲಿಸಿ ಕ್ರಿಯಾ ಯೋಜನೆ ಸಲ್ಲಿಸಿದೆ. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅದರಲ್ಲಿ ಕೆಲವೊಂದು ಹಳೆ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಕೇಳಲಾಗಿತ್ತು ಎನ್ನಲಾಗುತ್ತಿದೆ. ನಿರಂತರ ಕಾಮಗಾರಿಗಳಲ್ಲದೇ ಬೇರೆ ಬೇರೆ ಉದ್ದೇಶಗಳಿಗೂ ಕೆಕೆಆರ್‌ಡಿಬಿ ಹಣ ಬಳಸಿಕೊಳ್ಳಲಾಗುತ್ತಿತ್ತು. ಐಐಐಟಿ ಸಂಸ್ಥೆಗೆ ಅನಿವಾರ್ಯವಾಗಿ ಬೇಕಿದ್ದ ಕಾರಣ ವಿಶೇಷ ಪರವಾನಗಿ ಪಡೆದು ಐದು ಕಾಮಗಾರಿಗಳನ್ನು ಮಾತ್ರ ಈ ಸಾಲಿನಲ್ಲಿ ಆರಂಭಿಸಲಾಗಿದೆ.
ಕೆಕೆಆರ್‌ಡಿಬಿಯಡಿ ಹಳೆ ಕಾಮಗಾರಿ ಕೈಗೊಳ್ಳಲು ಯಾವುದೇ ನಿರ್ಬಂಧ ಇಲ್ಲ. ಹೊಸ ಕಾಮಗಾರಿಗೆ ಅವಕಾಶ ಇಲ್ಲ ಎಂದು ಸರ್ಕಾರ ತಿಳಿಸಿದೆ. 2020-21ನೇ ಸಾಲಿನ ಕ್ರಿಯಾಯೋಜನೆ ಸಲ್ಲಿಸಿದ್ದು, ಅನುಮೋದನೆ ಸಿಕ್ಕಿಲ್ಲ. ಐಐಐಟಿಗಾಗಿ ಕೆಲವೊಂದು ಕಾಮಗಾರಿ ಕೈಗೊಳ್ಳಬೇಕಾದ ಅನಿವಾರ್ಯತೆ ಇತ್ತು.ಹೀಗಾಗಿ ವಿಶೇಷ ಪರವಾನಗಿ ಪಡೆದು ಕೆಲಸ ನಡೆಸುತ್ತಿದ್ದೇವೆ.
-ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ರಾಯಚೂರು
ಕೋವಿಡ್-19 ಕಾರಣಕ್ಕೆ ತಡೆ ಹಿಡಿಯಲಾಗಿದ್ದ 2019-20ನೇ ಸಾಲಿನ 1270 ಕಾಮಗಾರಿಗಳಿಗೆ ಈಗ ಚಾಲನೆ ನೀಡಲಾಗಿದೆ. ಈ ಸಾಲಿನಲ್ಲೂ ಸರ್ಕಾರ 1100 ಕೋಟಿ ರೂ. ಮಂಡಳಿಗೆ ಬಿಡುಗಡೆ ಮಾಡಲಿದ್ದು, ವಾರದೊಳಗೆ ಅನುಮೋದನೆ ಸಿಗಬಹುದು. ಈ ಸಾಲಿನಲ್ಲಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಕ್ರಿಯಾಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಲ್ಲಿಕೆಯಾಗಿಲ್ಲ.
-ದತ್ತಾತ್ರೇಯ ಪಾಟೀಲ ರೇವೂರ, ಅಧ್ಯಕ್ಷ, ಕೆಕೆಆರ್‌ಡಿಬಿ
-ಸಿದ್ಧಯ್ಯಸ್ವಾಮಿ ಕುಕುನೂರು