ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಿರುವ ಸಸ್ಯ ಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.
ತೋಟಗಾರಿಕೆ ಸಸ್ಯಗಾರಗಳಲ್ಲಿ ವೈಜ್ಞಾನಿಕವಾಗಿ ಉತ್ಪಾದಿಸಿದ ಮತ್ತು ನುರಿತ ಅಧಿಕಾರಿಗಳಿಂದ ದೃಢೀಕರಿಸಿದ ಅನೇಕ ಸಸಿ, ಕಸಿಗಳ-ಹಣ್ಣಿನ ಸಸಿಗಳು, ಹೂವು, ತರಕಾರಿ ಅಷ್ಟೇ ಅಲ್ಲದೇ ಅಲಂಕಾರಿಕ ಸಸಿಗಳು, ತೆಂಗಿನ ಸಸಿಗಳು ಅಲ್ಲದೇ ತೋಟಗಾರಿಕೆಯಲ್ಲಿ ಬಳಸಲ್ಪಡುವ ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಕೃಷಿ ಸಲಕರಣೆ, ಬೀಜಗಳು, ಇಲಾಖೆಯ ಯೋಗ್ಯ ದರದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸುವುದು. ಅಲ್ಲದೇ ರೈತರಿಗೆ ತೋಟಗಾರಿಕೆ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಸಸ್ಯಸಂತೆಯನ್ನು ಆಯೋಜಿಸಲಾಗಿದೆ.
ಹವ್ಯಾಸಿ ತೋಟಗಾರರಿಗೆ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಮತ್ತು ವಿಷಮುಕ್ತ ಆಹಾರ ಉತ್ಪಾದಿಸುವ ಬಗ್ಗೆ ಕೈ ತೋಟ, ತಾರಸಿ ತೋಟ ಅಲ್ಲದೇ ತೋಟಗಾರಿಕೆಗೆ ಸಂಬಂಧಿಸಿದ ಉಪಕಸುಬುಗಳಾದ ಜೇನು ಸಾಕಾಣೆ, ಅಣಬೆ ಕೃಷಿಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತಜ್ಞರಿಂದ ಮಾಹಿತಿ ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಗಳಾದ ಜಲಕೃಷಿ, ಹನಿ ನೀರಾವರಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಪರಿಸರ ಸ್ವಚ್ಛಗೊಳಿಸುವ ಹಾಗೂ ನೀರಿನ ಸದ್ಬಳಕೆ ಮಾಡುವುದರ ಮೂಲಕ ರೋಗಗಳನ್ನು ತಡೆಗಟ್ಟುವ ವಿಧಾನಗಳನ್ನು ಸಸ್ಯ ಸಂತೆಯಲ್ಲಿ ಪ್ರಾತ್ಯಕ್ಷಿತೆ ಮೂಲಕ ತೋರಿಸಲಾಗುತ್ತಿದೆ. ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳಾದ ವಿವಿಧ ತಳಿ ಮಾವು, ನಿಂಬೆ, ಪೇರಲ, ಅಂಜೂರ, ನೇರಳೆ, ಕರಿಬೇವು, ನುಗ್ಗೆ, ತೆಂಗು ಅಲ್ಲದೇ ಹೂವಿನ ಬೆಳೆಗಳಾದ ಅನೇಕ ಬಣ್ಣ ಬಣ್ಣದ ಗುಲಾಬಿ, ದಾಸವಾಳ, ಮಲ್ಲಿಗೆ, ಪಾರಿಜಾತ ಮತ್ತು ಅಲಂಕಾರಿಕ ಗಿಡಗಳಾದ ಕ್ರೋಟನ್ಸ್, ಸೈಪ್ರಸ್, ಕ್ಯಾಕ್ಟಸ್, ಬೋನ್ಸಾಯ್ ಮಾದರಿ ಗಿಡಗಳು ಯೋಗ್ಯ ದರದಲ್ಲಿ ದೊರೆಯುತ್ತವೆ. ಇದಲ್ಲದೇ ಕೊಳವೆ ಬಾವಿ ಜಲ ಮರುಪೂರಣದ ಮಾದರಿ, ನಿರಂತರ ಆದಾಯಕ್ಕೆ ತೋಟಗಾರಿಕೆ ಬಗ್ಗೆ ಮಾಹಿತಿ ಅಲ್ಲದೇ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರೈತರಿಗೆ ತೋಟಗಾರಿಕೆಗೆ ಸಂಬಂಧಿಸಿದ ಅನೇಕ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಸಸ್ಯ ಸಂತೆಯಲ್ಲಿ 3 ದಿನಗಳಿಂದ 4ರಿಂದ 05 ಲಕ್ಷದಷ್ಟು ವಹಿವಾಟು ಆಗಿದೆ. ತೆಂಗಿನ ಸಸಿಗಳು ಸುಮಾರು 1.50 ಲಕ್ಷದಷ್ಟು ಮಾರಾಟವಾಗಿವೆ. ರೈತರು, ಸಾರ್ವಜನಿಕರು ತಮಗೆ ಬೇಕಾದ ಅನೇಕ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ಅಲಂಕಾರಿಕ ಗಿಡಗಳನ್ನು ಕಡಿಮೆ ದರದಲ್ಲಿ ಖರೀದಿಸಿರುತ್ತಾರೆ. ಈಗಾಗಲೇ 5 ಲಕ್ಷಕ್ಕೂ ಮೀರಿ ಮುಂಗಡವಾಗಿ ವಿವಿಧ ಸಸಿಗಳನ್ನು ಕಾಯ್ದಿರಿಸಿದ್ದಾರೆ. ಒಟ್ಟು 10 ಲಕ್ಷದಷ್ಟು ತರಕಾರಿ, ಹೂವಿನ ಮತ್ತು ಇತರೆ ಸಸಿಗಳನ್ನು ಉತ್ಪಾದಿಸಿ ಪೂರೈಸಲು ರೈತರು ಮತ್ತು ಗ್ರಾಹಕರು ಬೇಡಿಕೆ ಸಲ್ಲಿಸಿದ್ದು, ಇಲಾಖೆಯು ಅವುಗಳ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದೆ.