Advertisement

ಕಿವೀಸ್‌ ಕ್ರಿಕೆಟಿಗರ ಕ್ಯಾನ್ಸರ್‌ ಜಾಗೃತಿ ಹೋರಾಟ

11:36 PM Dec 30, 2019 | Sriram |

ಮೆಲ್ಬರ್ನ್: ನ್ಯೂಜಿಲ್ಯಾಂಡ್‌ ಆರಂಭಕಾರ ಟಾಮ್‌ ಬ್ಲಿಂಡೆಲ್‌ ಸಹಿತ ಕೆಲವು ಆಟಗಾರರು “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯ ವೇಳೆ ತಮ್ಮ ಬ್ಯಾಟ್‌ಗೆ ಬಹುವರ್ಣದ “ಗ್ರಿಪ್‌’ ಅಳವಡಿಸಿ ಗಮನ ಸೆಳೆದಿದ್ದರು. ಇದಕ್ಕೇನು ಕಾರಣ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ಕ್ರಿಕೆಟ್‌ ಜತೆಯಲ್ಲೇ ಕ್ಯಾನ್ಸರ್‌ ಜಾಗೃತಿಯ ಹೋರಾಟವನ್ನೂ ಮಾಡುತ್ತಿದ್ದಾರೆ!

Advertisement

ಕ್ಯಾನ್ಸರ್‌ನಿಂದ ನರಳುತ್ತಿರುವ 6 ವರ್ಷದ ಬಾಲಕಿ ಹೋಲಿ ಬೀಟಿ ಪರವಾಗಿ ಟಾಮ್‌ ಬ್ಲಿಂಡೆಲ್‌ ಈ ಕಲರ್‌ಫ‌ುಲ್‌ ಬ್ಯಾಟ್‌ ಬೀಸುತ್ತಿದ್ದಾರೆ. “ಫಾಕ್ಸ್‌ ಕ್ರಿಕೆಟ್‌’ ವರದಿ ಪ್ರಕಾರ ಹೋಲಿಯ ತಂದೆ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ
“ಪ್ಲೇಯರ್ ನ್ಪೋರ್ಟ್ಸ್ ಆ್ಯಂಡ್‌ ಕಂಪೆನಿ’ಯ ಸ್ಥಾಪಕ ಸದಸ್ಯರಾಗಿದ್ದಾರೆ. ಈ ಕಂಪೆನಿ ಕ್ಯಾನ್ಸರ್‌ ಪೀಡಿತರಿಗೆ ನೆರವಾಗಲು ನಾನಾ ಮೂಲಗಳಿಂದ ಹಣ ಸಂಗ್ರಹಿಸುತ್ತಿದೆ. ಇದರಲ್ಲಿ ಬಹು ವರ್ಣದ ಬ್ಯಾಟ್‌ ಗ್ರಿಪ್‌ ಕೂಡ ಒಂದಾಗಿದೆ. ಇದಕ್ಕೆ 9.99 ಡಾಲರ್‌ ಬೆಲೆ ನಿಗದಿಗೊಳಿಸಲಾಗಿದ್ದು, ಈ ಹಣ ಹೋಲಿ ಬೀಟಿಯ ಕ್ಯಾನ್ಸರ್‌ ಚಿಕಿತ್ಸೆಗೆ ಹೋಗುತ್ತದೆ.
ಕೇವಲ ಟಾಮ್‌ ಬ್ಲಿಂಡೆಲ್‌ ಮಾತ್ರವಲ್ಲ, ನೀಲ್‌ ವ್ಯಾಗ್ನರ್‌ ಮತ್ತು ಟಿಮ್‌ ಸೌಥಿ ಕೂಡ ತಮ್ಮ ಬ್ಯಾಟಿಗೆ ಈ ಗ್ರಿಪ್‌ ಹಾಕಿಕೊಂಡಿದ್ದರು. ಆದರೆ ಗಮನ ಸೆಳೆದದ್ದು ಮಾತ್ರ ಬ್ಲಿಂಡೆಲ್‌. ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಹಳ ಸಮಯದ ವರೆಗೆ ಕ್ರೀಸ್‌ ಆಕ್ರಮಿಸಿಕೊಂಡು ಶತಕ ಬಾರಿಸಿದ್ದರು.

ಇದಕ್ಕೂ ಮುನ್ನ ಟಿಮ್‌ ಸೌಥಿ ಟೀ ಶರ್ಟ್‌ ಒಂದನ್ನು ಈ ಫೌಂಡೇಶನ್‌ಗೆ ನೀಡಿದ್ದರು. ಈ ವರ್ಷ ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ನ್ಯೂಜಿಲ್ಯಾಂಡ್‌ ಕ್ರಿಕೆಟಿಗರೆಲ್ಲರ ಹಸ್ತಾಕ್ಷರವನ್ನು ಇದು ಒಳಗೊಂಡಿತ್ತು.

ಫ‌ಲಕಾರಿಯಾಗದ ಚಿಕಿತ್ಸೆ
ಟಾಮ್‌ ಬ್ಲಿಂಡೆಲ್‌ 50 ಹಾಗೂ 100 ರನ್‌ ಬಾರಿಸಿದ ವೇಳೆ ಬ್ಯಾಟ್‌ ಎತ್ತಿ ಸಂಭ್ರಮಿಸಿದ ಚಿತ್ರಗಳನ್ನು ತಮಗೆ ಕಳುಹಿಸಿದ್ದಾರೆ ಎಂದು ಬೀಟಿಯ ತಾಯಿ ಜೋನ್ನಾ ಹೇಳಿದ್ದಾರೆ. ಜತೆಗೆ ಅವರ ಶತಕದ ಸಂಭ್ರಮದ ವೀಕ್ಷಕ ವಿವರಣೆಯ ಧ್ವನಿಯನ್ನೂ ಮಗಳಿಗೆ ಕೇಳಿಸಿದೆವು ಎಂಬುದಾಗಿ ಜೋನ್ನಾ ಹೇಳಿದರು. ವೈದ್ಯಕೀಯ ವರದಿ ಪ್ರಕಾರ ಹೋಲಿ ಬೀಟಿಗೆ ನಡೆಸಲಾದ ಚಿಕಿತ್ಸೆ ಫ‌ಲಕಾರಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next