ಆಕ್ಲಂಡ್: ನ್ಯೂಜಿಲ್ಯಾಂಡ್ ಹಿರಿಯ ಆಟಗಾರ ಟಿಮ್ ಸೌಥಿ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 150 ವಿಕೆಟ್ ಕಿತ್ತ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಗೆ ಟಿಮ್ ಸೌಥಿ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಆಕ್ಲಂಡ್ ನ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯದಲ್ಲಿ ಸೌಥಿ ಈ ಸಾಧನೆ ಮಾಡಿದರು.
ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್ ಮತ್ತು ಸೌಥಿ ಕೊಡುಗೆಯೊಂದಿಗೆ 46 ರನ್ ಗಳ ಗೆಲುವು ದಾಖಲಿದ ನ್ಯೂಜಿಲ್ಯಾಂಡ್, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
35 ವರ್ಷದ ಸೌಥಿ ಇಂದಿನ ಪಂದ್ಯದಲ್ಲಿ ನಾಲ್ಕು ಓವರ್ ಗಳಲ್ಲಿ 25 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಮೊದಲ ಸ್ಪೆಲ್ ನಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹಮದ್ ವಿಕೆಟ್ ಪಡೆದ ಸೌಥಿ, ಮೊದಲ ಪಂದ್ಯವಾಡಿದ ಅಬ್ಬಾಸ್ ಅಫ್ರಿದಿ ವಿಕೆಟ್ ಕಿತ್ತು ಟಿ20 ಕ್ರಿಕೆಟ್ ನಲ್ಲಿ 150ನೇ ಬಲಿ ಪಡೆದರು. ಕೊನೆಯದಾಗಿ ಹ್ಯಾರಿಸ್ ರೌಫ್ ವಿಕೆಟನ್ನು ಸೌಥಿ ಪಡೆದರು.
ಸೌಥಿ ಅವರು 118 ಟಿ20 ಪಂದ್ಯಗಳಲ್ಲಿ 22.96 ರ ಅದ್ಭುತ ಬೌಲಿಂಗ್ ಸರಾಸರಿಯಲ್ಲಿ ಮತ್ತು 8.11 ರ ಎಕಾನಮಿ ದರದಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದರವರು
ಟಿಮ್ ಸೌಥಿ (ನ್ಯೂಜಿಲ್ಯಾಂಡ್) – 118 ಪಂದ್ಯಗಳಲ್ಲಿ 151 ವಿಕೆಟ್
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) – 117 ಪಂದ್ಯಗಳಲ್ಲಿ 140 ವಿಕೆಟ್
ರಶೀದ್ ಖಾನ್ (ಅಫ್ಘಾನಿಸ್ತಾನ) – 82 ಪಂದ್ಯಗಳಲ್ಲಿ 130 ವಿಕೆಟ್
ಇಶ್ ಸೋಧಿ (ನ್ಯೂಜಿಲ್ಯಾಂಡ್) – 106 ಪಂದ್ಯಗಳಲ್ಲಿ 127 ವಿಕೆಟ್
ಲಸಿತ್ ಮಾಲಿಂಗ (ಶ್ರೀಲಂಕಾ) – 84 ಪಂದ್ಯಗಳಲ್ಲಿ 107 ವಿಕೆಟ್