Advertisement

ನಟ ರಮೇಶ್ ಸೇರಿ ಮೂವರಿಗೆ ಕಿತ್ತೂರು ರಾಣಿ ಚನ್ನಮ್ಮ ವಿವಿ ಗೌರವ ಡಾಕ್ಟರೇಟ್

05:03 PM Sep 12, 2022 | Team Udayavani |

ಬೆಳಗಾವಿ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಚಲನಚಿತ್ರ ರಂಗದಲ್ಲಿ ಮಾಡಿದ ಸಾಧನೆಗಾಗಿ ನಟ ರಮೇಶ್ ಅರವಿಂದ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ, ಈ ಬಾರಿಯೂ ಗೌರವ ಡಾಕ್ಟರೇಟ್‌ಗೆ 15 ಅರ್ಜಿಗಳು ಬಂದಿದ್ದವು. ರಮೇಶ್ ಅರವಿಂದ್ ಅವರಿಗೂ ಡಾಕ್ಟರ್ ಆಫ್ ಲೆಟರ್ಸ್ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಬೀದರ್‌ನ ಬಸವ ತತ್ವ ಪ್ರಚಾರಕಿ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿ. ರವಿಚಂದರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸೆ. 14ರಂದು ಮಧ್ಯಾಹ್ನ 12. 30ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗಮಿಸುವರು. ಆಂಧ್ರಪ್ರದೇಶದ ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಹೇಳಿದರು.

ಘಟಿಕೋತ್ಸವದಲ್ಲಿ 43,607 ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 11 ಚಿನ್ನದ ಪದಕ ನೀಡಲಾಗುವುದು. 48 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

Advertisement

ಆರ್‌ಸಿಯು ವ್ಯಾಪ್ತಿಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 418 ಪದವಿ ಕಾಲೇಜುಗಳಿದ್ದು, 1.64 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 22 ವಿಷಯಗಳಲ್ಲಿ 2,500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್ಗಳ ಅಧ್ಯಯನ ಮಾಡುತ್ತಿದ್ದಾರೆ. 4 ವಿಷಯಗಳಲ್ಲಿ ಪಿ.ಜಿ ಡಿಪ್ಲೊಮಾ ಕೋರ್ಸ್ ಗಳಿವೆ. 530 ವಿದ್ಯಾರ್ಥಿಗಳು ಹಲವು ವಿಷಯಗಳಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next